Sunday, November 13, 2022

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*


    ಇದು ಒಂದು ದಿನದ ಮಾತಲ್ಲ ಪ್ರತಿನಿತ್ಯದ ಬದುಕಿನ ಬವಣೆ. ಹೌದು ಬವಣೆ ಗಳೆಂದರೆ ಬದುಕು. ಬೆಳಗ್ಗೆ ಎದ್ದಾಗಿನಿಂದ ರಾತ್ರಿಯವರೆಗೂ ಜಂಜಾಟದ ಬದುಕು ನಮ್ಮದು, ಸ್ವಲ್ಪವೂ ಹಿಂದಿರುಗಿ ನೋಡದ, ಸಮಯವಿಲ್ಲದ ಬದುಕು.


ಮುಂಜಾನೆ 6 ಘಂಟೆ 30ನಿಮಷದ ಸಮಯ ಕಿಡಕಿಯಲ್ಲಿ ಬೆಳಕಿನ ಕಿರಣಗಳು ಬಂದು ಕಣ್ಣನ್ನು ಆಲಂಗಿಸಲು ಬಂದಾಗ ದೂರದಿಂದ ಒಂದು ಹಾಡು ಅದು ಸ್ವಚ್ಛ ಭಾರತ್ ಕಾ ಅಭಿಯಾನ ಎಂದು ಕಸ ಎತ್ತುವವರ ವಾಹನದ ಹಾಡು, ಬೆಳಿಗ್ಗೆಯೇ ಮಕ್ಕಳು, ಮರಿ ಎಂದು ನೋಡದೆ, ಮಳೆ, ಬಿಸಿಲು ಎನ್ನದೆ ಬದುಕಿನ ಬಂಡಿಯನ್ನು ದೂಡಲು ಸಿದ್ಧರಾಗಿರುತ್ತಾರೆ. ಮಾಡುವ ಕೆಲಸ ಯಾವುದೇ ಆಗಲಿ ಬದುಕಿನ ಜಂಜಾಟ ನೀಗಿಸಲು ಇದು ಅನಿವಾರ್ಯ. ಬೆಳಗಾದರೆ ಸಾಕು ಇತ್ತ ಬೀದಿ ಬದಿಯ ವ್ಯಾಪಾರಿಗಳ ಸಾಲು ಸಾಲುವ್ಯಾಪಾರ, ಒಬ್ಬರಿಗಿಂತ ಒಬ್ಬರು ಜೋರಾಗಿ ತಾಜ ಹಣ್ಣುಗಳು,ಹೂವುಗಳು, ತರಕಾರಿಗಳು ಎಂದು ಕೂಗುತ್ತಿರುತ್ತಾರೆ.ಅಲ್ಲೇ ಬದಿಯಲ್ಲಿ ಕುಳಿತ ಚಪ್ಪಲಿ ರಿಪೇರಿ ಮಾಡುವವನು ರಸ್ತೆಯಲ್ಲಿ ಹೋಗಿ ಬರುವವರ ಕಾಲುಗಳನ್ನೇ ನೋಡುತ್ತಿದ್ದಾನೆ. ದೇವಸ್ಥಾನದ ಮುಂದೆ ಕುಳಿತ ಮಹಿಳೆ ನನ್ನ ಬಳಿ ಬನ್ನಿ ಹಣ್ಣು ಕಾಯಿ ತೆಗೆದುಕೊಳ್ಳಿ ಎನ್ನುತಿದ್ದಾಳೆ. ಅಲ್ಲೇ ಇನ್ನೊಬ್ಬ ದಕ್ಷಿಣೆ ಕೊಡಿ ನಿಮ್ಮ ಭವಿಷ್ಯ ಹೇಳುತ್ತೇನೆ ಎಂದು ಗಿಳಿಯನ್ನು ಇಟ್ಟುಕೊಂಡು ಕುಳಿತಿದ್ದಾನೆ.ಬೆಳಗಿನ ಈ ದೃಶ್ಯಗಳು ಬದುಕಿನ ಜಂಜಾಟದ ನಿದರ್ಶನಗಳಾಗಿವೆ.


ನನಗಿನ್ನೂ ನೆನೆಪಿದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ದೊಂಬರಾಟದವರು ನಮ್ಮ ಶಾಲೆಗೆ ಬಂದು ಕೆಲವು ಆಟಗಳನ್ನು ತೋರಿಸಿದ್ದು, ಒಬ್ಬ ಹುಡುಗಿ ಹಗ್ಗದ ಮೇಲೆ ನಡೆದಿದ್ದು, ಮಂಗ ಕರೆತಂದು ಆಟವಾಡಿಸಿದ್ದು, ಅವರಿಗೆ ಎಂಟ ಅಣೆ, ಒಂದು ರೂಪಾಯಿ ಕೊಟ್ಟಿದ್ದು ಅಬ್ಬಾ! ಅಂದು ತಿಳುವಳಿಕೆ ಇಲ್ಲದೆ ಖುಷಿಯಿಂದ ನೋಡಿದ ದೊಂಬರಾಟದ ನಿಜವಾದ ಮುಖ ಈಗ ತಿಳಿದಿದೆ ಇದು ಕೇವಲ ಆಟವಲ್ಲ ತುತ್ತು ಅನ್ನಕ್ಕಾಗಿ ಈ ಆಟ ಎಂದು. ಅದೆಷ್ಟು ಜನ ಒಂದಿಲ್ಲ ಒಂದು ರೀತಿಯಲ್ಲಿ ಬದುಕಿನ ಬವಣೆ ತೀರಿಸುತ್ತಿದ್ದಾರೆ. ಬಿರುಬಿಸಿಲಿನಲ್ಲಿ ಕಂಕುಳಲ್ಲಿ ಮಗು ಹೊತ್ತು, ತಲೆ ಮೇಲೆ ಚಾಪೆ ಹೊತ್ತು ಬಂದ ಮಹಿಳೆಯ ನೋಡಿ ಬೇಸರವಾಯಿತು. ಇದೆಂತಹಾ ಪರಿಸ್ಥಿತಿ ತಾಯಿ ಮಗುವಿನ ಬಿರು ಬಿಸಿಲಿನ ಅಲೆದಾಟ. ಶಿಕ್ಷಕಿಯೊಬ್ಬಳು ತನ್ನ ಮಗುವನ್ನು ಬೇರೆಡೆ ಬಿಟ್ಟು ತಾನು ಶಾಲೆಗೆ ಹಾಜರಾಗುತ್ತಾಳೆ. ಇನ್ನು ಕಟ್ಟದ ನಿರ್ಮಿಸಲು ಬಂದವರು, ಕಾರ್ಮಿಕರು, ಚಿಂದಿ ಆಯುವವರು ಎಲ್ಲರದು ಒಂದು ವಿಭಿನ್ನ ರೀತಿಯ ಬವಣೆಯ ಬದುಕು. ಸಂಜೆ ಆದರೆ ಪುಟ್ಟ ಡಬ್ಬಿಯ ಅಂಗಡಿಗಳಲ್ಲಿ ಮಾರುವ ಕುರು ಕುರು ತಿಂಡಿಗಳ ವ್ಯಾಪಾರ, ಅಬ್ಬಾ ಒಂದೇ ಎರಡೇ ಇದಲ್ಲ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಕಷ್ಟಪಡುವುದೇ ಬದುಕನ್ನು ಸವೆಸಲು ಇದು ಒಂದು ದಿನದ ಹೋರಾಟವಲ್ಲ,


ಇನ್ನು ಕೆಲವು ಕಡೆ ವಿಭಿನ್ನ ರೀತಿಯ ಜಂಜಾಟ ಬೆಳಿಗ್ಗೆ ಎದ್ದರೆ ಬಸ್ಸು, ವಾಹನಗಳ ಶಬ್ದ, ವಾಹನಗಳನ್ನು ತಲುಪಲು ಹವಣಿಸುತ್ತಿರುವ ಜನ, ಆಫೀಸ್ ಗೆ ಸರಿಯಾದ ಸಮಯಕ್ಕೆ ಹೋಗುವ ತರಾತುರಿ, ಗಡಿಬಿಡಿ, ಅದರಲ್ಲೇ ವಾಹನಗಳು ಹೋಗಲು ಜಾಗವಿಲ್ಲದಷ್ಟು ಗೌಜು, ಗದ್ದಲ ಇವೆಲ್ಲವು ಜೀವನದ ನಿರ್ವಹಣೆಗೆ ನಾವು ಪಡುವ ಕಷ್ಟಗಳಾಗಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕಿನ ಬವಣೆ ಅನುಭವಿಸಿ ಹೊಟ್ಟೆ ತುಂಬಿಸಲು ಸನ್ನದ್ಧರಾಗಿರುತ್ತಾರೆ. *ಹೌದು ಬದುಕೇ,- ಬವಣೆ ನಿನಗಾಗಿ

..*


 ಎಲ್ಲರದು ಒಂದೊಂದು ರೀತಿಯ ಬದುಕು..

No comments:

Post a Comment

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*     ಇದು ಒಂದು ದಿನದ ಮಾತಲ್ಲ ಪ್...