Thursday, June 10, 2021

ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದು ಮಾಳದ ಗರುಕೆ ಚಿಗುರ್ಯಾವೋ

 
 
  


  ಜಾನಪದ ಇಲ್ಲಿ ಭಕ್ತಿಯ ಆವೇಶದೊಂದಿಗೆ ಚಲಿಸುತ್ತಲೇ ಇದೆ. ನಾಡಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯವಾದ ಮಾದೇಶ್ವರನ ಕುರಿತ ನೂರಾರು ಕತೆಗಳು ಹಾಡುಗಳ ರೂಪ ಪಡೆದು ಜನ ಸಾಮಾನ್ಯರ ಬಾಯಿಯಲ್ಲಿ ನಲಿದಾಡುತ್ತಲೇ ಇವೆ. ಕಾಲ ಪ್ರವಾಹ ವೇಗವಾಗ ಹರಿಯುತ್ತಿದ್ದರೂ ಇಲ್ಲಿನ ಜನಪದಕ್ಕೆ, ಜನಮನದ ಭಕ್ತಿಗೆ ಮುಕ್ಕಾಗಿಲ್ಲ. ಸದ್ಯಕ್ಕೆ ಅದು ಮುಕ್ಕಾಗುವುದೂ ಇಲ್ಲ.

 
ಯಾಕೆಂದರೆ ಅಂತಹುದೊಂದು ಭಕ್ತಿಯ ಆವೇಶ ಇಲ್ಲಿನ ಜನಪದದೊಂದಿಗೆ ಬೆಸೆದುಕೊಂಡಿದೆ ಬೆಸುಗೆಯೇ ಭವ್ಯ ಸಂಸ್ಕೃತಿಯೊಂದನ್ನು ಪೊರೆಯುತ್ತಾ ಬಂದಿದೆಇದೆಲ್ಲಾ ಸಾಧ್ಯವಾಗಿರುವುದು ಮಲೆಯ ಮಹದೇಶ್ವರ ಬೆಟ್ಟದಲ್ಲಿಬೆಟ್ಟದ ಸುತ್ತಮುತ್ತಲಿನಲ್ಲಿಬೆಟ್ಟದ ಮಾದೇವನ ಪ್ರಭಾವವಿರುವ ಎಲ್ಲಾ ಕಡೆಗಳಲ್ಲಿ.
 
ಅಲ್ಲಿ ಭಕ್ತರ ಮನದಲ್ಲೆಲ್ಲಾ ಮಾದಪ್ಪಕಿವಿ ತಿರುಗಿದ ಕಡೆಯೆಲ್ಲಾ ಉಘೇ ಉಘೇಕಣ್ಣು ಹಾಯಿಸಿದಲ್ಲೆಲ್ಲಾ ಬೆಟ್ಟಗುಡ್ಡಧೂಪದೀಪಗಳ ಮಾಲೆಕಂಸಾಳೆಕುಣಿತಹಾಡು ಪಾಡುಎಲ್ಲೆಲ್ಲೂ ಮಾದಪ್ಪಅವನೊಬ್ಬನೇ ಸತ್ಯಅವನು ಕಣ್ಣು ಬಿಟ್ಟು ನೋಡಿದರೆ ಕೊರಡು ಕೊನರುವುದುಮನೆ ಬೆಳಗುವುದುಮನ ತಣಿಯುವುದುಏಳು ಬೆಟ್ಟಹತ್ತಿಏಳು ಬೆಟ್ಟಇಳಿದು ಬಂದ ದಣಿವೆಲ್ಲಾ ಮರೆಯುವುದು ಎನ್ನುವ ನಂಬಿಕೆಆನುಮಲೆಜೇನು ಮಲೆಕಾನುಮಲೆಪೊನ್ನಾಚಿ ಮಲೆಪಚ್ಚೆ ಮಲೆಪವಳ ಮಲೆಕೊಂಗು ಮಲೆಗಳು ಸೇರಿ 77 ಮಲೆಗಳ ಮಧ್ಯೆ ನೆಲೆಯಾಗಿರುವ ಧಾರ್ಮಿಕ ಗುರುಸಾಂಸ್ಕೃತಿಕ ನಾಯಕ ಮಾದಪ್ಪ ಹೆಚ್ಚಾಗಿ ಬಡವರ ಮನೆ ಕಾಯುವ ದೇವಗ್ರಾಮೀಣ ಜನರ ಬಂಧುಗುಡ್ಡರನೀಲಗಾರರ ಬಾಯಲ್ಲಿ ನಲಿದಾಡುವ ಪವಾಡ ಪುರುಷಉತ್ತರ ದೇಶದ ಕತ್ತಲ ರಾಜ್ಯದ ಉತ್ತರಾಜಮ್ಮನ ಮಗ 7 ವರ್ಷದವನಾಗಿದ್ದಾಗಲೇ ದಕ್ಷಿಣಕ್ಕೆ ಬಂದು ಬಂಕಾಪುರದ ರಕ್ಕಸ ಶ್ರವಣನ ಕೊಂದುಸುತ್ತೂರು ಮಠದಲ್ಲಿ ರಾಗಿಯ ಬೀಸಿಕುಂತೂರು ಮಠದಲ್ಲಿ ದನ ಮೇಯಿಸಿ ಎಲ್ಲಾ ಕಡೆ ಪವಾಡ ಮಾಡುತ್ತಾ ಪೂರ್ವ ಘಟ್ಟದ ನಡುವಲ್ಲಿ ನೆಲೆಯಾಗಿ ನಿಂತವನು.



ಕಲ್ಪನೆಯ ಕಣ್ಣಲ್ಲಿ ಮಾಯ್ಕಾರ :

 

                           ಹೀಗೆ ನಿಂತವನಿಗೆ ಭಕ್ತರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಹಾಡು ಕಟ್ಟಿಆ ಹೃದಯದಲ್ಲಿ ಅವನು ಗಟ್ಟಿಯಾಗಿ ನಿಲ್ಲುವಂತೆ ಮಾಡಿಕೊಂಡಿದ್ದಾರೆ. ಅಚ್ಚರಿ ಎನ್ನಿಸುವಂತಹ ಕಲ್ಪನೆಗಳನ್ನು ಕಟ್ಟಿಅದರ ಒಳಗೆ ಮಾದೇವನನ್ನು ಬೆಚ್ಚಗೆ ಇರಿಸಿದ್ದಾರೆ.

ಆನು ಮಲೆ ಹಾಸುಕೊಂಡು ಜೇನುಮಲೆ ಹೊದ್ದುಕೊಂಡು ಎಪ್ಪತ್ತೇಳು ಮಲೆಯನ್ನು ಸುರುಳಿ ಸುತ್ತಿ ತಲೆದಿಂಬನ್ನಾಗಿ ಮಾಡಿಕೊಂಡು ಒರಗಿರುವಂತಹ ನಮ್ಮ ಅಪ್ಪಾಜಿ ಮುದ್ದು ಮಾದೇವನ ಪಾದುಕ್ಕೊಂದು ಸಲ ಉಘೇ ಅನ್ರಪ್ಪ!’

ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಕಾಡುಮಲೆ, ಕಂಬತ್ತಿಮಲೆ, ಹತ್ತುಮಲೆ, ಸುತ್ತುಮಲೆ, ಮಹಂತುಮಲೆ, ವಿಭೂತಿಮಲೆ, ರುದ್ರಾಕ್ಷಿಮಲೆ, ಸಂಕುಮಲೆ, ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್ಸಲ ಉಘೇ ಅನ್ರಪ್ಪ!’

ಹೀಗೆ ತಮ್ಮದೇ ಕಲ್ಪನೆಯಲ್ಲಿ ಮಾದೇಶ್ವರನನ್ನು ಕಂಡಿದ್ದಾರೆ. ಇದೇ ರೀತಿ ಹೇಳುತ್ತಾ ಹೋದರೆ ಕಲ್ಪನೆಯ ಕಣ್ಣುಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಕೊಯಮತ್ತೂರು, ಸೇಲಂ ಹೀಗೆ ನಾಡಿನಾದ್ಯಂತ, ನಾಡಿನಾಚೆಗೆ ಭಕ್ತರನ್ನು ಹೊಂದಿರುವ ಮಾದಪ್ಪ ನಂಬಿದವರ ಮನೆಯ ಒಳಗೆ ತುಂಬಿ ತುಳುಕಾಡುವ ದೇವ. ಎಲ್ಲರ ಬಾಯಿಯಲ್ಲೂ ಏಕವಚನದಲ್ಲಿ ಕರೆಸಿಕೊಳ್ಳುವಷ್ಟುಆಪ್ತ. ಸಂಶೋಧನೆಗೆ ಇಳಿದವ ಪಾಲಿಗೆ ಇತಿಹಾಸ ಪುರುಷ. ಜನಪದ ಮತ್ತು ಸಾಹಿತ್ಯ ಲೋಕದ ಕಥಾನಾಯಕ. ಹೀಗೆ ನಾನಾ ಅವತಾರಗಳಲ್ಲಿ ಅವನಿಂದಿಗೂ ಜೀವಂತ.

 

ಪ್ರಪಂಚದ ಮಹಾ ಮೌಖಿಕ ಮಹಾಕಾವ್ಯ :

 

                 ಮಾದೇಶ್ವರನ ಗುಡ್ಡರು, ನೀಲಗಾರರ ಬಾಯಲ್ಲಿ ಮಹಾಕಾವ್ಯವಾಗಿ ಮದೇಶ್ವರ ಜೀವಂತವಾಗಿ ಇರುವ ರೀತಿಯೇ ಹೆಂಗಸರ ಬಾಯಿಯಲ್ಲಿ ಹಾಡುಗಳಾಗಿ ಉಳಿದಿದ್ದಾನೆ. ಗುಡ್ಡರು, ನೀಲಗಾರರು ಮಹಾಕಾವ್ಯವನ್ನು ಇರುಳಿಡೀ ಹಾಡಿದರೆ, ಹೆಂಗಸರು ಮಹಾಕಾವ್ಯದ ಹಿನ್ನೆಲೆಯಲ್ಲಿ ಹಾಡುಗಳನ್ನು ಕಟ್ಟಿಹಾಡಿದ್ದಾರೆ. ಹಾಡುಗಳೇ ಇಂದು ಜನಪದವಾಗಿ ಬೆಳೆದು ನಿಂತಿದೆ. ಏಳು ಹಗಲು, ಏಳು ರಾತ್ರಿಗಳ ಕಾಲ ನಿರಂತರವಾಗಿ ಹಾಡುವಷ್ಟುದೊಡ್ಡದಾಗಿರುವ ಮದೇಶ್ವರ ಮಹಾಕಾವ್ಯ ಇದೇ ಕಾರಣಕ್ಕೆ ಜಗತ್ತಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯ ಆಗಿರುವುದು. ಬೇವಿನಹಟ್ಟಿಕಾಳಮ್ಮನ ಕತೆ, ಬಾಣಸೂರನ ಕಥೆ, ನೀಲವೇಣಿ ಕಥೆ, ಸರಗೂರಯ್ಯನ ಕತೆ, ಶರಣೆ ಶಂಕವ್ವನಕಥೆ ಹೀಗೆ ಹಲವು ಕಥೆಗಳಿವೆ.

ಮಹಾಕಾವ್ಯದಲ್ಲಿವೆ. ಒಂದೊಂದು ಕಥೆಗೂ ಪವಾಡಗಳ ಸ್ಪರ್ಶವಿದೆ. ಭಕ್ತಿಯ ಲೇಪನವಿದೆ. ಮಹಾಕಾವ್ಯವನ್ನು ಕೇಳಬೇಕು, ಕಣ್ತುಂಬಿಕೊಳ್ಳಬೇಕು, ಗುಡ್ಡರ ಹಾಡು, ನೀಲಗಾರರ ಪದ, ಜನಪದರ ರಾಗವನ್ನು ಸವಿಯಬೇಕು ಎಂದರೆ ಮಾದಪ್ಪನ ಪರಿಷೆಗೆ ಹೋಗಬೇಕು. ಅಕ್ಷರ ಗೊತ್ತಿಲ್ಲದವರ ಮಹಾಕಾವ್ಯವನ್ನು ಅಲ್ಲಿ ಕೇಳಬೇಕು. ಅಲ್ಲಿ ಸಂಗೀತ ಇದೆ, ಸಾಹಿತ್ಯ ಇದೆ, ಭಕ್ತಿ ಇದೆ, ಕುಣಿತ ಇದೆ, ಸಂಸ್ಕೃತಿ ಇದೆ, ಶ್ರೀಮಂತ ಜನಪದವಿದೆ. ಒಂದು ಲೆಕ್ಕಕ್ಕೆ ಇದು ಬಡವರ, ಹಿಂದುಳಿದವರ, ಗ್ರಾಮೀಣರ, ಮಹಿಳೆಯರ ಸಾಂಸ್ಕೃತಿಕ ಅಭಿವ್ಯಕ್ತಿ.

 




ಜಾತ್ರೆಯಲ್ಲಿ ಕಂಡ ಮುಖ :

 

                ಬೆಟ್ಟಕ್ಕೆ ಬಂದುಹೋಗುವ ಭಕ್ತರಲ್ಲಿ ಹೆಂಗಸರದ್ದೇ ಮೈಲುಗೈ. ಮಾದೇವ ಮಾಯ್ಕಾರ ಮಾದೇವ ಆಗಲು, ಮುದ್ದು ಮಾದೇವ ಆಗಲು, ದುಂಡು ಮುಖದ ಮಾದೇವ ಆಗಲು ಅವರೇ ಕಾರಣ. ವಿವಿಧ ರೀತಿಯ ಹರಕೆಗಳನ್ನು ಹೊತ್ತು, ನನ್ನ ಕಷ್ಟಕಳೆಯೋ ಮಾದೇವ, ನನ್ನ ಮನೆಯ ಉಳಿಸೋ ಮಾದೇವ ಎಂದು ಏಕವಚನದಲ್ಲಿಯೇ ಅತ್ಯಂತ ಪ್ರೀತಿಯಿಂದ ಬೇಡುತ್ತಾರೆ. ಬೈಯುತ್ತಾರೆ, ಅವನೊಂದಿಗೆ ಮುನಿಸಿಕೊಳ್ಳುತ್ತಾರೆ. ಪಂಜು ಸೇವೆ, ಉರುಳು ಸೇವೆ, ಹುಲಿವಾಹನ ಸೇವೆ, ನಂದಿವಾಹನ ಸೇವೆ, ಧೂಪಸೇವೆ ಹೀಗೆ ದೇಹವನ್ನು ದಂಡಿಸುತ್ತಾ, ಪದ ಕಟ್ಟಿಹಾಡುತ್ತಾ ಮಾದೇವನ ಬಳಿ ತಮ್ಮ ಕಷ್ಟಹೇಳಿಕೊಂಡು ವರ ಬೇಡುತ್ತಾರೆ. ಉತ್ತರಾಜಮ್ಮನಿಗೆ, ಶರಣೆ ಸಂಕವ್ವನಿಗೆ, ಕಾರಯ್ಯ, ಬಿಲ್ಲಯ್ಯರಿಗೆಲ್ಲಾ ಉಘೇ ಉಘೇ ಎನ್ನುತ್ತಾ ಭಕ್ತಿಯ ಆವೇಶದಲ್ಲಿ ಜಗದ ಜಂಜಾಟಗಳ ಮರೆಯುತ್ತಾರೆ. ಹಣೆ ತುಂಬಾ ವಿಭೂತಿ ಹಚ್ಚಿಕೊಂಡು ನಮ್ಮನ್ನು ಕಾಯುವವನೊಬ್ಬನಿದ್ದಾನೆ, ಕಷ್ಟಗಳೆಲ್ಲಾ ಮುಕ್ತಿ ಕೊಡುತ್ತಾನೆ ಎಂದುಕೊಳ್ಳುತ್ತಾ ಅದೇ ನಂಬಿಕೆಯಲ್ಲಿ ನಲಿವು ಕಾಣುತ್ತಾರೆ. ಹಾಡುತ್ತಾ, ಕುಣಿಯುತ್ತಾ ಸಾಗುತ್ತಾರೆ.

 

 ಬರುವವರು ಮಹದೇಶ್ವರ ಬೆಟ್ಟದ ಬುಡ (ತಾಳುಬೆಟ್ಟ)ದಿಂದಲೇ ನಡೆದುಕೊಂಡು ಬರುತ್ತಾರೆ. ಈಗ ಒಳ್ಳೆಯ ರಸ್ತೆ ಇರುವ ಕಾರಣ, ಸಾರಿಗೆ ವ್ಯವಸ್ಥೆಯೂ ಚೆನ್ನಾಗಿಯೇ ಇದ್ದು, ಬಸ್‌, ಕಾರು, ಆಟೋ, ಬೈಕ್ಗಳಲ್ಲಿ ಬಂದು ಬೆಟ್ಟಸೇರುತ್ತಾರೆ. ಆಲಂಬಾಡಿ ಜುಂಜೇಗೌಡ ಕಟ್ಟಿಸಿದ ದೇವಸ್ಥಾನದಲ್ಲಿ ನೆಲೆಯಾಗಿರುವ ಮಾದೇವನನ್ನು ಕಾಣುತ್ತಾರೆ. ಅವನ ಬಗ್ಗೆ ಹಾಡುತ್ತಾರೆ, ಕುಣಿಯುತ್ತಾರೆ. ಈಗ ಉಳಿದುಕೊಳ್ಳಲೂ ಇಲ್ಲಿ ಸಾಕಷ್ಟುಅನುಕೂಲಗಳಿವೆ. ಸರಕಾರ ಮಲೆ ಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಾಕಷ್ಟುಅಭಿವೃದ್ಧಿ ಕಾರ್ಯ ಮಾಡಿದೆ. ಸುತ್ತೂರು ಮಠ, ಕುಂತೂರು ಮಠ ಸೇರಿ ನಾಡಿನ ಹಲವು ಮಠಗಳು ಇಲ್ಲಿ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿವೆ. ನಿತ್ಯ ಅನ್ನದಾಸೋಹವಿದೆ.










ನಾಗಮಲೆಯ ದಾರಿಯಲ್ಲಿ :

 

                              ಬೆಟ್ಟಕ್ಕೆ ಬರುವವರ ಮತ್ತೊಂದು ಆಕರ್ಷಣೆ ನಾಗಮಲೆ. ಏಳು ಬೆಟ್ಟದಾಚೆಗೆ ನಾಗಮಲೆಯಲ್ಲಿ ನಾಗನ ನೆರಳಿನಲ್ಲಿ ಮಾದಪ್ಪ ನೆಲೆಯಾಗಿದ್ದಾನೆ ಎನ್ನುವ ನಂಬಿಕೆ ಭಕ್ತರದ್ದು. ಅದಕ್ಕಾಗಿಯೇ ಬೆಟ್ಟಕ್ಕೆ ಬಂದವರಲ್ಲಿ ಅರ್ಧದಷ್ಟಾದರೂ ಭಕ್ತರು ನಾಗಮಲೆಗೆ ನಡೆದು ಹೋಗುತ್ತಾರೆ. ಸುತ್ತಲೂ ಕಾಡು, ಕಲ್ಲು, ಮುಳ್ಳಿನ ಹಾದಿಯಲ್ಲಿ ಏಳು ಬೆಟ್ಟಗಳನ್ನತ್ತಿಳಿದು ನಾಗಮಲೆ ತಲುಪುತ್ತಾರೆ. ಈಗ ನಾಗಮಲೆಗೆ ಸಾಗುವ ಅರ್ಧ ದಾರಿಯತನಕ ಜೀಪ್ಗಳು ಓಡಾಡುವ ವ್ಯವಸ್ಥೆಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಇವುಗಳ ಓಟಾಟ ಶುರು. ಅಲ್ಲಿಗೆ ಅರ್ಧದ ತನಕ ಜೀಪ್ನಲ್ಲಿ ಹೋಗಿ ಇನ್ನರ್ಧವನ್ನು ಕಾಲು ನಡಿಗೆಯಲ್ಲಿ ಸಾಗಿದರೆ ನಾಗಮಲೆ ತಲುಪಿಕೊಂಡುಬಿಡಬಹುದು. ದಾರಿ ಮಧ್ಯದಲ್ಲಿ ಎರಡು ಊರು. ಅಲ್ಲಿ ಸೋಲಿಗರು, ಬೇಡಗಂಪಣರು, ಕಾಡು ಜನರ ವಾಸ. ಕೃಷಿ, ಬೇಟೆಯೇ ಅವರ ಮೂಲ ಕಸುಬಾದರೂ ಈಗೀಗ ನಾಗಮಲೆಗೆ ಹೋಗಿ ಬರುವ ಭಕ್ತರ ಅವಶ್ಯಗಳನ್ನು ಪೂರೈಸಲು ಸಣ್ಣ ಪುಟ್ಟಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಇವರ ದಯೆಯಿಂದ ನಾಗಮಲೆಯ ಹಾದಿ ಸಲೀಸು. ಜಾತ್ರೆಯ ವೇಳೆ ಇಲ್ಲಿಗೆ ಹೋದರಂತೂ ದಾರಿ ಸಾಗುವ ಉದ್ದಕ್ಕೂ ಮಾದೇವನ ಪದಗಳು, ಉಘೇ, ಉಘೇ ಘೋಷಣೆ, ಕಾಡುಜನರ ಉಪಚಾರ ಎಲ್ಲವೂ ಲಭ್ಯ. ಇದಿಷ್ಟೇ ಅಲ್ಲ, ಭಕ್ತಿಯೊಂದಿಗೆ ಮೈಮನ ಮುಟ್ಟುವ ಬೆಟ್ಟದ ಸಾಲು

ಅಷ್ಟೇನೂ ದಟ್ಟವಲ್ಲದ ಕುರುಚಲು ಕಾಡು, ನಾಗಮಲೆ ಏರಿ ನಿಂತರೆ ಬದಿಗೆ ಕಾವೇರಿ, ಪಾಲಾರ್ನದಿಗಳ ದರ್ಶನ. ನದಿಯಾಚೆಗೆ ತಮಿಳುನಾಡು. ನಾಗಮಲೆ ದಾಟಿ ಅದೇ ಹಾದಿಯಲ್ಲಿ ಕಾಡು ಹಾದಿಯಲ್ಲಿಯೇ ಮುಂದೆ ಸಾಗಿದರೆ ಕರ್ನಾಟಕ ಗಡಿ ಗೋಪಿನಾಥಂ. ಅಲ್ಲಿಂದ ಹೊಗೆನಕಲ್ಫಾಲ್ಸ್ಗೆ ಹಾದಿ. ಹೀಗೆ ಭಕ್ತಿಯ ನೆರಳಲ್ಲಿ ಮಿಂದು, ಪ್ರಕೃತಿಯ ಮಡಿಲಲ್ಲಿ ವಿರಮಿಸಿ ಹೊರಡುವವರ ಸಂಖ್ಯೆಯೂ ಇಲ್ಲಿದೆ….

      ಕನ್ನಡ ನಾಡಿನ ಜಾನಪದ ಸಾಹಿತ್ಯದಲ್ಲಿ ಕಂಸಾಳೆ ಪದಗಳಿಗೆ ಅದರದ್ದೇ ಆದ ಸ್ಥಾನವಿದೆ. ಇಡೀ ವಿಶ್ವದಲ್ಲೇ ಕಲೇವಲ ಎಂಬ ಪೋಲಾಂಡ್ ದೇಶದ ಮೌಖಿಕ ಕಾವ್ಯವು ಅತಿ ದೊಡ್ಡ ಮಹಾಕಾವ್ಯ. ಅದು ಬಿಟ್ಟರೆ ಎರಡನೆಯದು ನಮ್ಮ ಮಾದೇಶ್ವರನ ಕಾವ್ಯ. ಮೌಖಿಕ ಕಾವ್ಯ ಎಂದರೆ ಅದು ಬಾಯಿಂದ ಬಾಯಿಗೆ ಸಾಗಿಬಂದ ಕಾವ್ಯ, ಬರೆದಿಟ್ಟ ಕಾವ್ಯವಲ್ಲ. ಅಂದರೆ ಮಾತಿನ ಮೂಲಕ ರಚನೆಯಾದ ಕಾವ್ಯ.




ಮುಖ್ಯವಾಗಿ ಯುವಜನತೆಗೆ :

 

                         ನಮ್ಮ ಮಾದೇಶ್ವರನ ಕಾವ್ಯಕ್ಕೆ ಕಂಸಾಳೆ ಕಾವ್ಯ ಎಂದೂ ಹೇಳಬಹುದು ಕಾರಣ ಮಾದೇಶ್ವರನ ಕಥೆ ಮಾಡುವಾಗ ಕಂಸಾಳೆ ದಂಬಡಿ ತಂಬೂರಿ ಮುಂತಾದ ಉಪಕರಣಗಳನ್ನು ಬಳಸಿ ಮಾದೇಶ್ವರನ ಕಥೆ ಮಾಡಲಾಗುತ್ತದೆ. ಇದರಲ್ಲಿ ಕಂಸಾಳೆ ಬಟ್ಟಲು ಮುಖ್ಯ ಉಪಕರಣ. ಮಾದೇಶ್ವರನ ಕಥೆ ಅಥವಾ ಕಾವ್ಯ ಇದು ಏಳು ಹಗಲು ಏಳು ರಾತ್ರಿ ಕಾವ್ಯ ಎಂದು ನಾನು ಕೇಳಿದ್ದೇನೆ. ಇದರಲ್ಲಿ ಅನೇಕ ಸಾಲುಗಳು ಬರುತ್ತವೆ. ಅವುಗಳಲ್ಲಿ ಮುಖ್ಯವಾದವು - ಮಾದೇಶ್ವರ ಹುಟ್ಟಿ ಬೆಳೆದ ಸಾಲು, ಸಂಕಮ್ಮನ ಸಾಲು, ಬೇವಿನಹಟ್ಟಿ ಕಾಳಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಆಲಂಬಾಡಿ ಜುಂಜೆಗೌಡನ ಸಾಲು, ಸರಗೂರಯ್ಯನ ಸಾಲು ಮುಖ್ಯವಾದವು.

 

ಇಂತಹ ಕಾವ್ಯಗಳು ಕೇಳುಗರಲ್ಲಿ ಆಸಕ್ತಿ, ಕುತೂಹಲ, ಹಾಸ್ಯ, ಭಕ್ತಿ  ಭಾವಗಳನ್ನು ಮೂಡಿಸುತ್ತವೆ. ಕೇಳಲು ಇಂಪಾಗಿರುತ್ತದೆ. ಹಿಂದೆ ಯಾರಾದರೂ ಮೃತರಾದರೆ ಅವರ ವೈಕುಂಠ ಸಮಾರಾಧನೆ ದಿನದಂದು ಇಂತಹ ಕಂಸಾಳೆ ಕಥೆಗಳನ್ನೋ ಅಥವಾ ಹರಿಕಥೆಗಳನ್ನೋ ಮಾಡಿಸುತ್ತಿದ್ದರು. ಈಗ ಕ್ರಮೇಣ ಇಂತಹ ಆಚರಣೆಗಳು ಕಡಿಮೆಯಾಗಿವೆ.

 

ಮಾದೇಶ್ವರನ ಬಗ್ಗೆ ನಾವು ತಿಳಿಯಬೇಕಾದರೆ ನಮಗೆ ಕಂಸಾಳೆ ಕಥೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ. ಆದರೆ ಇದರ ಮೇಲಿನ ಆಸಕ್ತಿ ಇಂದಿನ ಯುವಜನಾಂಗದಲ್ಲಿ ಕಾಣುತ್ತಿಲ್ಲ ಎಂಬುದು ವಿಷಾದನೀಯ.

 

ನಮ್ಮ ಪುರಾಣಗಳಲ್ಲಿ ನಾವು ಯಾವುದೇ ಪುಣ್ಯಕ್ಷೇತ್ರಗಳಿಗೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದರೆ ನಾವು ಸ್ಥಳದ ಮಹಾತ್ಮೆ ತಿಳಿಯಬೇಕು ಇದರಿಂದ ನಮಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ನಾವು ನಮ್ಮ ಮಾದೇಶ್ವರನ ಬೆಟ್ಟಕ್ಕೆ ಭೇಟಿ ನೀಡಿದರೆ ನಾವು ನಮಗೆ ಗೊತ್ತಿಲ್ಲದ ಮಾಹಿತಿ ಸಂಗ್ರಹಿಸಬೇಕು. ಮಾದೇಶ್ವರನ ಕಾವ್ಯ ನಮ್ಮ ಕನ್ನಡ ನಾಡಿನ ಜಾನಪದ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದೆ.

 

ಕಾವ್ಯವು ಸಾವಿರಾರು ಜಾನಪದ ಗೀತೆಗಳಿಗೆ ತಾಯಿಬೇರಾಗಿದೆ. ಆದರೆ ನಮ್ಮ ದುರಾದೃಷ್ಟಕ್ಕೆ ಇಂದಿನ ಕೆಲವು ಯುವಜನಾಂಗ ಮಾದೇಶ್ವರನ ಬೆಟ್ಟಕ್ಕೆ ಕೇವಲ ಸೆಲ್ಫಿ ಫೋಟೋ ತೆಗೆದುಕೊಳ್ಳಲು, ಅಥವಾ ಕೇವಲ ಮನರಂಜನೆಗೋಸ್ಕರ ಅಥವಾ ಮೋಜು ಮಸ್ತಿ ಮಾಡಲಿಕ್ಕೆ ಬರುತ್ತಾರೇ ವಿನಃ ಮಾದಪ್ಪನ ಮೇಲಿನ ಆಸಕ್ತಿ ಕೆಲವರಿಗೆ ಬೇಕಿಲ್ಲ. ಬರೀ ಸ್ನಾನ ಮಾಡಿ ಸರತಿಯಲ್ಲಿ ನಿಂತು ಸ್ವಾಮಿಯ ದರ್ಶನ ಮಾಡಿ ಕೆಲವು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಎಷ್ಟು ಲೈಕ್ ಎಷ್ಟು ಕಮೆಂಟ್ ಬರುತ್ತವೆ ಎಂದು ತಿಳಿದುಕೊಂಡು ಖುಷಿ ಪಡುತ್ತಾರೆ.

 

ನಾವು ನಮ್ಮ ಸಂಸ್ಕೃತಿ ಪರಂಪರೆಗಳನ್ನು ರಕ್ಷಿಸಬೇಕು. ಮಾದಪ್ಪನ ಕಥೆ ಮಾಡುವ ನೀಲಗಾರರಿಗೆ ಪ್ರೋತ್ಸಾಹ ನೀಡಬೇಕು. ಮಾದೇಶ್ವರನ ಕಥೆಗಳು ಯೂಟ್ಯೂಬ್ನಲ್ಲಿ ಸಿಗುತ್ತದೆ. ಕೆಲವರು ಇಂತಹ ಪುಣ್ಯಕಥೆಗಳನ್ನು ಅಪ್ಲೋಡ್ ಮಾಡಿದ್ದಾರೆ. ಅವುಗಳನ್ನು ಕೇಳಿ ಆನಂದಿಸಿ. ಅವುಗಳಲ್ಲಿ ಸಿಗುವ ಮಾಹಿತಿ ಸಂಗ್ರಹಿಸಿ. ಪುಣ್ಯಕಥೆಗಳ ಸಂಗ್ರಹದಿಂದ ನಿಜಕ್ಕೂ ಪುಣ್ಯ ದೊರೆಯಲಿದೆ.

ಒಂದಂತೂ ಸತ್ಯ, ಎಲ್ಲಿಯವರೆಗೆ ಮಾದೇಶ್ವರನ ಕಥೆಗಳು ಇರುತ್ತವೆಯೋ ಅಲ್ಲಿಯವರೆಗೂ ಮಹದೇಶ್ವರ ಇರುತ್ತಾನೆ. ಯಾವಾಗ ಇಂತಹ ಕಥೆಗಳು ಮರೆಯಾಗುತ್ತವೆಯೋ ಅಂದೇ ಮಹದೇಶ್ವರ ಮರೆಯಾಗುತ್ತಾನೆ.

 

                                                                            ಶ್ರೀ ಮಲೈ ಮಹದೇಶ್ವರ ಸ್ವಾಮಿ ತಂಡ 

ಚೇತನ್ ಬಂಡಳ್ಳಿ

     





.

13 comments:

  1. Uge madappa nivu barediruva ee lekhana thumba adbutha vagidde aguu madappa na shrugaara viboga galu sogasaagide ide rithi nimma kaleyannu mundu varesi

    ReplyDelete
  2. ಉಘೇ ಮಾದಪ್ಪ ಅದ್ಭುತವಾದ ಲೇಖನ ಚೇತನ್ ನಿಮ್ಮ ಬರವಣಿಗೆ ಈಗೆ ಮುಂದುವರಿಯಲಿ...🙏🙏🙏

    ReplyDelete
    Replies
    1. ಧನ್ಯವಾದಗಳು, ನಿಮ್ಮ ಹೆಸರು ದಯವಿಟ್ಟು ತಿಳಿಸಿ

      Delete
  3. ಉಘೇ ಮಾದಪ್ಪ, ಚಮತ್ಕಾರ ಬರವಣಿಗೆ ಈಗೆ ಮುಂದುವರಿಯಲಿ good luck 💐💐

    ReplyDelete
  4. Huge madappa super brooo tumba adbuthavagi ede

    ReplyDelete
    Replies
    1. ಧನ್ಯವಾದಗಳು, ನಿಮ್ಮ ಹೆಸರು ದಯವಿಟ್ಟು ತಿಳಿಸಿ

      Delete
  5. Anandnaik ಶ್ರೀ ಮಲೆಮಾದೇಶ್ವರ ಪಾದಯಾತ್ರೆ ತಂಡ

    ReplyDelete
  6. Anandnaik ಶ್ರೀ ಮಲೆಮಾದೇಶ್ವರ ಪಾದಯಾತ್ರೆ ತಂಡ

    ReplyDelete
  7. Replies
    1. ಧನ್ಯವಾದಗಳು, ನಿಮ್ಮ ಹೆಸರು ದಯವಿಟ್ಟು ತಿಳಿಸಿ!?

      Delete

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*     ಇದು ಒಂದು ದಿನದ ಮಾತಲ್ಲ ಪ್...