Sunday, June 13, 2021

ನನ್ನ ಅನಿಸಿಕೆಯಲ್ಲಿ ಮಾದಪ್ಪನ ನಿಲುವು

 


         ಆತ್ಮೀಯ ಮಾದಪ್ಪನ ಭಕ್ತಕೋಟಿಯಲ್ಲಿ ಮಹದೇಶ್ವರರ ಬಗೆಗಿನ ನನ್ನ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ.


 ನಾನಂತೂ ಮಹದೇಶ್ವರರ ಬಗೆಗೆ ಮಾತನಾಡುವಷ್ಟು ದೊಡ್ಡವನಲ್ಲ. ನಾನು ಮಹದೇಶ್ವರರ ಕಥೆಯನ್ನು ಸಂಪೂರ್ಣವಾಗಿ ತಿಳಿದಿಲ್ಲ. ಆದರೆ ನಾನು ಕೇಳಿರುವಷ್ಟು ಕಥೆಯಲ್ಲಿ ನಾನು ಅರ್ಥ ಮಾಡಿಕೊಂಡಿದ್ದನ್ನು ಮಾತ್ರ ಇಲ್ಲಿ ವಿವರಿಸುತ್ತಿದ್ದೇನೆ. 


ನಮ್ಮೆಲ್ಲರಿಗೂ ತಿಳಿದಂತೆ ಮಹದೇಶ್ವರರು ಉತ್ತರ ದೇಶದ ಉತ್ತಮಾಪುರದಿಂದ ದಕ್ಷಿಣದ ಕತ್ತಲ ನಾಡಿಗೆ ದಯಮಾಡಿ ದುಷ್ಟ ಶ್ರವಣನನ್ನು ಸಂಹಾರ ಮಾಡಿ ಲೋಕ ಪರಿಪಾಲಕರಾಗಿ,  ಕಲಿಯನ್ನು ಕಟ್ಟಿ ಆಳುವ ದೇವರಾಗಿ ಎಪ್ಪತ್ತೇಳು ಮಲೆಗಳಲ್ಲಿ ನೆಲೆಸುತ್ತಾರೆ.  


ಆದರೆ ಮಹದೇಶ್ವರರ ಅವತಾರ ಬರೀ ಶ್ರವಣ ರಕ್ಕಸನ ಸಂಹಾರಕ್ಕಾಗಿ ಆಯಿತೇ, ಖಂಡಿತ ಇಲ್ಲ. ಮಹದೇಶ್ವರರು ಶ್ರವಣ ರಾಕ್ಷಸನ ಸಂಹಾರಕ್ಕೆ ಬಂದದ್ದು ಕೇವಲ ನೆಪ ಮಾತ್ರ. ಆದರೆ ಇವರು ಈ ದಕ್ಷಿಣ ನಾಡಿಗೆ ಬಂದ ಮೂಲ ಕಾರಣವೇ ಬೇರೆ.


ದಕ್ಷಿಣದಲ್ಲಿ ಇದ್ದ ಬಂಕಾಪುರಿಯ ಶ್ರವಣನನ್ನೇನೋ ಸಂಹಾರ ಮಾಡಿದರು. ಆದರೆ ಇದೇ ದಕ್ಷಿಣ ನಾಡಿನಲ್ಲಿ ಸ್ಥಿರವಾಗಿ ನೆಲೆ ನಿಂತುಬಿಟ್ಟರು. ಇವರು ಇಲ್ಲಿಗೆ ಬಂದ ಮೂಲ ಕಾರಣ ಈ ದಕ್ಷಿಣ ಭಾಗದಲ್ಲಿ ತುಳಿತಕ್ಕೆ ಒಳಗಾದ, ಶೋಷಣೆಗೆ ಒಳಗಾದ ಅನೇಕ ಜನರ ಕಲ್ಯಾಣಕ್ಕಾಗಿ, ವಿಶೇಷವಾಗಿ ದಕ್ಷಿಣ ನಾಡಿನ ಅರಣ್ಯ ವಾಸಿಗಳ ಕಲ್ಯಾಣಕ್ಕಾಗಿ.


ಸ್ವಾಮಿಗೆ ಯಾವುದೇ ವೈದಿಕ ಸಂಪ್ರದಾಯದ ಪೂಜೆ ಇಷ್ಟ ಇರಲಿಲ್ಲ ಎಂದು ತೋರುತ್ತದೆ. ಅದಕ್ಕೆ ತನ್ನ ಪೂಜೆಗೆ ಗಿರಿಜನ ವರ್ಗಕ್ಕೆ (ST catagory) ಸೇರಿದ ಬೇಡರ ಕುಲದವರನ್ನು ತನ್ನ ಪೂಜೆಗೆ ನೇಮಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುತ್ತದೆ.


ಹೌದು, ಮಾದಪ್ಪನ ಭಕ್ತರಲ್ಲಿ ಹೆಚ್ಚಿನವರು ಶೂದ್ರರು, ಅಂದರೆ ಅಂದಿನ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದವರು. 


     ಇಲ್ಲಿ ನನಗೆ ತಿಳಿದದ್ದು ಏನೆಂದರೆ ಮಾದಪ್ಪನ ಪೂಜೆ ಮಾಡುವ ತಂಬಡಿಗಳು ಮೂಲತಃ ಬೇಡರು ಹಾಗೂ ಮಾದಪ್ಪನ ಕಂಸಾಳೆ ಶೈಲಿಯ ಕಥೆಯನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ದಲಿತರು. ಆದರೆ ಇಂದು ಎಲ್ಲಾ ವರ್ಗದವರೂ ಮಾದಪ್ಪನ ಕಥೆ ಮಾಡುತ್ತಾರೆ. 

ಈ ಮೂಲಕ  ಮಾದಪ್ಪನ ಪರಂಪರೆ ವೃದ್ದಿಗೊಳ್ಳುತ್ತಿದೆ. ಆದರೆ ಕಂಸಾಳೆ ಕಥೆಗಾರರು ಮೂಲತಃ ದಲಿತರು. ಅಂದರೆ ಮಹದೇಶ್ವರರ ಕಂಸಾಳೆ ಕಥೆಗಳನ್ನು ಹಾಡಲು ಆರಂಭಿಸಿದವರು ದಲಿತ ವರ್ಗಕ್ಕೆ ಸೇರಿದವರು. ಹೀಗೆ ಹರಿಜನ ಗಿರಿಜನ ಎಂಬ ಬೇಧ ಮಾಡದೇ ಎಲ್ಲಾ ವರ್ಗದವರನ್ನು ಒಪ್ಪುವ ಮಾದಪ್ಪನ ಪರಂಪರೆಯು ಹುಟ್ಟಿಕೊಂಡಿತು.

ಎಲ್ಲರ ಮನೆಮನೆಗೂ ನುಗ್ಗುವ ದೇವರು ಮಾದೇಶ್ವರ. ಮಾದೇಶ್ವರರ ಕಥೆಯಲ್ಲಿ ಹೇಳುವಂತೆ ಅವರು ಇಲ್ಲಿ ನೆಲೆಯಾಗಲು ಕಾರಣ ದುಷ್ಟರ ಸಂಹಾರಕ್ಕೆ, ಶಿಷ್ಟರ ರಕ್ಷಣೆಗೆ, ನಾನುನಾನು ಎಂದು ಅಹಂಕಾರ ಮಾಡುವವರ ಹಮ್ಮನ್ನು ಮುರಿಯಲಿಕ್ಕೆ, ನಂಬಿದ ಭಕ್ತರ ಸಲಹಲಿಕ್ಕೆ. 


ಮಹದೇಶ್ವರರು ವೈದಿಕ ಪರಂಪರೆಯನ್ನು ಧಿಕ್ಕರಿಸುವ ಕಾರಣದಿಂದಲೇ ಇರಬಹುದು ಮಾದಪ್ಪನ ಬೆಟ್ಟದಲ್ಲಿ ಗ್ರಹಣ ಕಾಲವನ್ನೂ ಲೆಕ್ಕಿಸದೇ ಪೂಜೆ ಮಾಡುವುದು.


ಅಂದರೆ ಮಹದೇಶ್ವರರು ನಮ್ಮಲ್ಲಿನ ಮೌಢ್ಯತೆ ಹಾಗೂ ಕಂದಾಚಾರದ ವಿರುದ್ಧ ಹೋರಾಟ ನಡೆಸಿದವರು ಆಗಿರಬೇಕು.


ಒಟ್ಟಾರೆ ಹೇಳಬೇಕೆಂದರೆ ಮಹದೇಶ್ವರರು ದಕ್ಷಿಣ ಸೀಮೆಗೆ ಬಂದದ್ದು ಎಲ್ಲಾ ವರ್ಗದ ಜನರ ಉದ್ದಾರ ಮಾಡಿ ಎಲ್ಲರನ್ನೂ ಸಮವರ್ಗಕ್ಕೆ ತರುವ ಉದ್ದೇಶದಿಂದ ಇರಬಹುದು.


ಇದು ನನಗೆ ಅನಿಸಿದಂತೆ ಮಹದೇಶ್ವರರ ನಿಲುವು. ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ಅಥವಾ ಯಾರ ಮನಸ್ಸಿಗಾದರೂ ನೋವಾದಲ್ಲಿ ಯಾರ ಭಾವನೆಗಾದರೂ ಧಕ್ಕೆಯಾದಲ್ಲಿ  ಮನ್ನಿಸಬೇಕು. 


ಇದು ಕೇವಲ ನನ್ನ ಅಭಿಪ್ರಾಯ ಮಾತ್ರ. ಆದರೆ ಇದೇ ನಿಜವೆಂದು ಯಾರಮೇಲೂ ಒತ್ತಡ ಹೇರುವ ಭಾವನೆ ನನಗಿಲ್ಲ. 

No comments:

Post a Comment

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*     ಇದು ಒಂದು ದಿನದ ಮಾತಲ್ಲ ಪ್...