Sunday, November 13, 2022

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*


    ಇದು ಒಂದು ದಿನದ ಮಾತಲ್ಲ ಪ್ರತಿನಿತ್ಯದ ಬದುಕಿನ ಬವಣೆ. ಹೌದು ಬವಣೆ ಗಳೆಂದರೆ ಬದುಕು. ಬೆಳಗ್ಗೆ ಎದ್ದಾಗಿನಿಂದ ರಾತ್ರಿಯವರೆಗೂ ಜಂಜಾಟದ ಬದುಕು ನಮ್ಮದು, ಸ್ವಲ್ಪವೂ ಹಿಂದಿರುಗಿ ನೋಡದ, ಸಮಯವಿಲ್ಲದ ಬದುಕು.


ಮುಂಜಾನೆ 6 ಘಂಟೆ 30ನಿಮಷದ ಸಮಯ ಕಿಡಕಿಯಲ್ಲಿ ಬೆಳಕಿನ ಕಿರಣಗಳು ಬಂದು ಕಣ್ಣನ್ನು ಆಲಂಗಿಸಲು ಬಂದಾಗ ದೂರದಿಂದ ಒಂದು ಹಾಡು ಅದು ಸ್ವಚ್ಛ ಭಾರತ್ ಕಾ ಅಭಿಯಾನ ಎಂದು ಕಸ ಎತ್ತುವವರ ವಾಹನದ ಹಾಡು, ಬೆಳಿಗ್ಗೆಯೇ ಮಕ್ಕಳು, ಮರಿ ಎಂದು ನೋಡದೆ, ಮಳೆ, ಬಿಸಿಲು ಎನ್ನದೆ ಬದುಕಿನ ಬಂಡಿಯನ್ನು ದೂಡಲು ಸಿದ್ಧರಾಗಿರುತ್ತಾರೆ. ಮಾಡುವ ಕೆಲಸ ಯಾವುದೇ ಆಗಲಿ ಬದುಕಿನ ಜಂಜಾಟ ನೀಗಿಸಲು ಇದು ಅನಿವಾರ್ಯ. ಬೆಳಗಾದರೆ ಸಾಕು ಇತ್ತ ಬೀದಿ ಬದಿಯ ವ್ಯಾಪಾರಿಗಳ ಸಾಲು ಸಾಲುವ್ಯಾಪಾರ, ಒಬ್ಬರಿಗಿಂತ ಒಬ್ಬರು ಜೋರಾಗಿ ತಾಜ ಹಣ್ಣುಗಳು,ಹೂವುಗಳು, ತರಕಾರಿಗಳು ಎಂದು ಕೂಗುತ್ತಿರುತ್ತಾರೆ.ಅಲ್ಲೇ ಬದಿಯಲ್ಲಿ ಕುಳಿತ ಚಪ್ಪಲಿ ರಿಪೇರಿ ಮಾಡುವವನು ರಸ್ತೆಯಲ್ಲಿ ಹೋಗಿ ಬರುವವರ ಕಾಲುಗಳನ್ನೇ ನೋಡುತ್ತಿದ್ದಾನೆ. ದೇವಸ್ಥಾನದ ಮುಂದೆ ಕುಳಿತ ಮಹಿಳೆ ನನ್ನ ಬಳಿ ಬನ್ನಿ ಹಣ್ಣು ಕಾಯಿ ತೆಗೆದುಕೊಳ್ಳಿ ಎನ್ನುತಿದ್ದಾಳೆ. ಅಲ್ಲೇ ಇನ್ನೊಬ್ಬ ದಕ್ಷಿಣೆ ಕೊಡಿ ನಿಮ್ಮ ಭವಿಷ್ಯ ಹೇಳುತ್ತೇನೆ ಎಂದು ಗಿಳಿಯನ್ನು ಇಟ್ಟುಕೊಂಡು ಕುಳಿತಿದ್ದಾನೆ.ಬೆಳಗಿನ ಈ ದೃಶ್ಯಗಳು ಬದುಕಿನ ಜಂಜಾಟದ ನಿದರ್ಶನಗಳಾಗಿವೆ.


ನನಗಿನ್ನೂ ನೆನೆಪಿದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ದೊಂಬರಾಟದವರು ನಮ್ಮ ಶಾಲೆಗೆ ಬಂದು ಕೆಲವು ಆಟಗಳನ್ನು ತೋರಿಸಿದ್ದು, ಒಬ್ಬ ಹುಡುಗಿ ಹಗ್ಗದ ಮೇಲೆ ನಡೆದಿದ್ದು, ಮಂಗ ಕರೆತಂದು ಆಟವಾಡಿಸಿದ್ದು, ಅವರಿಗೆ ಎಂಟ ಅಣೆ, ಒಂದು ರೂಪಾಯಿ ಕೊಟ್ಟಿದ್ದು ಅಬ್ಬಾ! ಅಂದು ತಿಳುವಳಿಕೆ ಇಲ್ಲದೆ ಖುಷಿಯಿಂದ ನೋಡಿದ ದೊಂಬರಾಟದ ನಿಜವಾದ ಮುಖ ಈಗ ತಿಳಿದಿದೆ ಇದು ಕೇವಲ ಆಟವಲ್ಲ ತುತ್ತು ಅನ್ನಕ್ಕಾಗಿ ಈ ಆಟ ಎಂದು. ಅದೆಷ್ಟು ಜನ ಒಂದಿಲ್ಲ ಒಂದು ರೀತಿಯಲ್ಲಿ ಬದುಕಿನ ಬವಣೆ ತೀರಿಸುತ್ತಿದ್ದಾರೆ. ಬಿರುಬಿಸಿಲಿನಲ್ಲಿ ಕಂಕುಳಲ್ಲಿ ಮಗು ಹೊತ್ತು, ತಲೆ ಮೇಲೆ ಚಾಪೆ ಹೊತ್ತು ಬಂದ ಮಹಿಳೆಯ ನೋಡಿ ಬೇಸರವಾಯಿತು. ಇದೆಂತಹಾ ಪರಿಸ್ಥಿತಿ ತಾಯಿ ಮಗುವಿನ ಬಿರು ಬಿಸಿಲಿನ ಅಲೆದಾಟ. ಶಿಕ್ಷಕಿಯೊಬ್ಬಳು ತನ್ನ ಮಗುವನ್ನು ಬೇರೆಡೆ ಬಿಟ್ಟು ತಾನು ಶಾಲೆಗೆ ಹಾಜರಾಗುತ್ತಾಳೆ. ಇನ್ನು ಕಟ್ಟದ ನಿರ್ಮಿಸಲು ಬಂದವರು, ಕಾರ್ಮಿಕರು, ಚಿಂದಿ ಆಯುವವರು ಎಲ್ಲರದು ಒಂದು ವಿಭಿನ್ನ ರೀತಿಯ ಬವಣೆಯ ಬದುಕು. ಸಂಜೆ ಆದರೆ ಪುಟ್ಟ ಡಬ್ಬಿಯ ಅಂಗಡಿಗಳಲ್ಲಿ ಮಾರುವ ಕುರು ಕುರು ತಿಂಡಿಗಳ ವ್ಯಾಪಾರ, ಅಬ್ಬಾ ಒಂದೇ ಎರಡೇ ಇದಲ್ಲ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಕಷ್ಟಪಡುವುದೇ ಬದುಕನ್ನು ಸವೆಸಲು ಇದು ಒಂದು ದಿನದ ಹೋರಾಟವಲ್ಲ,


ಇನ್ನು ಕೆಲವು ಕಡೆ ವಿಭಿನ್ನ ರೀತಿಯ ಜಂಜಾಟ ಬೆಳಿಗ್ಗೆ ಎದ್ದರೆ ಬಸ್ಸು, ವಾಹನಗಳ ಶಬ್ದ, ವಾಹನಗಳನ್ನು ತಲುಪಲು ಹವಣಿಸುತ್ತಿರುವ ಜನ, ಆಫೀಸ್ ಗೆ ಸರಿಯಾದ ಸಮಯಕ್ಕೆ ಹೋಗುವ ತರಾತುರಿ, ಗಡಿಬಿಡಿ, ಅದರಲ್ಲೇ ವಾಹನಗಳು ಹೋಗಲು ಜಾಗವಿಲ್ಲದಷ್ಟು ಗೌಜು, ಗದ್ದಲ ಇವೆಲ್ಲವು ಜೀವನದ ನಿರ್ವಹಣೆಗೆ ನಾವು ಪಡುವ ಕಷ್ಟಗಳಾಗಿವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕಿನ ಬವಣೆ ಅನುಭವಿಸಿ ಹೊಟ್ಟೆ ತುಂಬಿಸಲು ಸನ್ನದ್ಧರಾಗಿರುತ್ತಾರೆ. *ಹೌದು ಬದುಕೇ,- ಬವಣೆ ನಿನಗಾಗಿ

..*


 ಎಲ್ಲರದು ಒಂದೊಂದು ರೀತಿಯ ಬದುಕು..

Sunday, July 4, 2021

ಮಾದಪ್ಪನ ಭಕ್ತಾದಿಗಳಿಗೆ ಸಿಹಿ ಸುದ್ದಿ

 ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಪ್ರವೇಶಕ್ಕೆ ನಾಳೆಯಿಂದ ಅವಕಾಶ ನೀಡಲಾಗ್ತಿದೆ 05.07.2021.




ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಪ್ರವೇಶಕ್ಕೆ ನಾಳೆಯಿಂದ ಅವಕಾಶ ನೀಡಲಾಗ್ತಿದೆ

ಚಾಮರಾಜನಗರ: ರಾಜ್ಯದಲ್ಲಿ ಲಾಕ್​ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಹನೂರಿನ ಇತಿಹಾಸಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಪ್ರವೇಶಕ್ಕೆ ನಾಳೆಯಿಂದ ಅವಕಾಶ ನೀಡಲಾಗ್ತಿದೆ. ಬೆಳಗ್ಗೆ 6 ರಿಂದ ಸಂಜೆ 6 ತನಕ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ.

ಭಕ್ತರು ದರ್ಶನ ಮಾತ್ರ ಪಡೆಯಬಹುದಾಗಿದ್ದು.. ದಾಸೋಹ, ತೀರ್ಥ ಪ್ರಸಾದ ಲಾಡು ಪ್ರಸಾದ ಇರುವುದಿಲ್ಲ. ಯಾವುದೇ ಸೇವೆಗಳು, ಉತ್ಸವಗಳು, ಮುಡಿ ಸೇವೆಯು ಕೂಡ ಇರುವುದಿಲ್ಲ. ಭಕ್ತರು ಮಾಸ್ಕ್ ಧರಿಸಿ ಕೊರೊನಾ ನಿಯಮ ಪಾಲಿಸುವುದು ಕಡ್ಡಾಯ. ಕೋವಿಡ್ ಮಾರ್ಗಸೂಚಿ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಇನ್ನು ಬೆಟ್ಟದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ಇಲ್ಲ ಅಂತ ಮಲೆಮಹದೇಶ್ವರ ಸ್ವಾಮಿ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ‌ ಮಾಹಿತಿ ನೀಡಿದ್ದಾರೆ.



Sunday, June 13, 2021

ನನ್ನ ಅನಿಸಿಕೆಯಲ್ಲಿ ಮಾದಪ್ಪನ ನಿಲುವು

 


         ಆತ್ಮೀಯ ಮಾದಪ್ಪನ ಭಕ್ತಕೋಟಿಯಲ್ಲಿ ಮಹದೇಶ್ವರರ ಬಗೆಗಿನ ನನ್ನ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ.


 ನಾನಂತೂ ಮಹದೇಶ್ವರರ ಬಗೆಗೆ ಮಾತನಾಡುವಷ್ಟು ದೊಡ್ಡವನಲ್ಲ. ನಾನು ಮಹದೇಶ್ವರರ ಕಥೆಯನ್ನು ಸಂಪೂರ್ಣವಾಗಿ ತಿಳಿದಿಲ್ಲ. ಆದರೆ ನಾನು ಕೇಳಿರುವಷ್ಟು ಕಥೆಯಲ್ಲಿ ನಾನು ಅರ್ಥ ಮಾಡಿಕೊಂಡಿದ್ದನ್ನು ಮಾತ್ರ ಇಲ್ಲಿ ವಿವರಿಸುತ್ತಿದ್ದೇನೆ. 


ನಮ್ಮೆಲ್ಲರಿಗೂ ತಿಳಿದಂತೆ ಮಹದೇಶ್ವರರು ಉತ್ತರ ದೇಶದ ಉತ್ತಮಾಪುರದಿಂದ ದಕ್ಷಿಣದ ಕತ್ತಲ ನಾಡಿಗೆ ದಯಮಾಡಿ ದುಷ್ಟ ಶ್ರವಣನನ್ನು ಸಂಹಾರ ಮಾಡಿ ಲೋಕ ಪರಿಪಾಲಕರಾಗಿ,  ಕಲಿಯನ್ನು ಕಟ್ಟಿ ಆಳುವ ದೇವರಾಗಿ ಎಪ್ಪತ್ತೇಳು ಮಲೆಗಳಲ್ಲಿ ನೆಲೆಸುತ್ತಾರೆ.  


ಆದರೆ ಮಹದೇಶ್ವರರ ಅವತಾರ ಬರೀ ಶ್ರವಣ ರಕ್ಕಸನ ಸಂಹಾರಕ್ಕಾಗಿ ಆಯಿತೇ, ಖಂಡಿತ ಇಲ್ಲ. ಮಹದೇಶ್ವರರು ಶ್ರವಣ ರಾಕ್ಷಸನ ಸಂಹಾರಕ್ಕೆ ಬಂದದ್ದು ಕೇವಲ ನೆಪ ಮಾತ್ರ. ಆದರೆ ಇವರು ಈ ದಕ್ಷಿಣ ನಾಡಿಗೆ ಬಂದ ಮೂಲ ಕಾರಣವೇ ಬೇರೆ.


ದಕ್ಷಿಣದಲ್ಲಿ ಇದ್ದ ಬಂಕಾಪುರಿಯ ಶ್ರವಣನನ್ನೇನೋ ಸಂಹಾರ ಮಾಡಿದರು. ಆದರೆ ಇದೇ ದಕ್ಷಿಣ ನಾಡಿನಲ್ಲಿ ಸ್ಥಿರವಾಗಿ ನೆಲೆ ನಿಂತುಬಿಟ್ಟರು. ಇವರು ಇಲ್ಲಿಗೆ ಬಂದ ಮೂಲ ಕಾರಣ ಈ ದಕ್ಷಿಣ ಭಾಗದಲ್ಲಿ ತುಳಿತಕ್ಕೆ ಒಳಗಾದ, ಶೋಷಣೆಗೆ ಒಳಗಾದ ಅನೇಕ ಜನರ ಕಲ್ಯಾಣಕ್ಕಾಗಿ, ವಿಶೇಷವಾಗಿ ದಕ್ಷಿಣ ನಾಡಿನ ಅರಣ್ಯ ವಾಸಿಗಳ ಕಲ್ಯಾಣಕ್ಕಾಗಿ.


ಸ್ವಾಮಿಗೆ ಯಾವುದೇ ವೈದಿಕ ಸಂಪ್ರದಾಯದ ಪೂಜೆ ಇಷ್ಟ ಇರಲಿಲ್ಲ ಎಂದು ತೋರುತ್ತದೆ. ಅದಕ್ಕೆ ತನ್ನ ಪೂಜೆಗೆ ಗಿರಿಜನ ವರ್ಗಕ್ಕೆ (ST catagory) ಸೇರಿದ ಬೇಡರ ಕುಲದವರನ್ನು ತನ್ನ ಪೂಜೆಗೆ ನೇಮಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುತ್ತದೆ.


ಹೌದು, ಮಾದಪ್ಪನ ಭಕ್ತರಲ್ಲಿ ಹೆಚ್ಚಿನವರು ಶೂದ್ರರು, ಅಂದರೆ ಅಂದಿನ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದವರು. 


     ಇಲ್ಲಿ ನನಗೆ ತಿಳಿದದ್ದು ಏನೆಂದರೆ ಮಾದಪ್ಪನ ಪೂಜೆ ಮಾಡುವ ತಂಬಡಿಗಳು ಮೂಲತಃ ಬೇಡರು ಹಾಗೂ ಮಾದಪ್ಪನ ಕಂಸಾಳೆ ಶೈಲಿಯ ಕಥೆಯನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ದಲಿತರು. ಆದರೆ ಇಂದು ಎಲ್ಲಾ ವರ್ಗದವರೂ ಮಾದಪ್ಪನ ಕಥೆ ಮಾಡುತ್ತಾರೆ. 

ಈ ಮೂಲಕ  ಮಾದಪ್ಪನ ಪರಂಪರೆ ವೃದ್ದಿಗೊಳ್ಳುತ್ತಿದೆ. ಆದರೆ ಕಂಸಾಳೆ ಕಥೆಗಾರರು ಮೂಲತಃ ದಲಿತರು. ಅಂದರೆ ಮಹದೇಶ್ವರರ ಕಂಸಾಳೆ ಕಥೆಗಳನ್ನು ಹಾಡಲು ಆರಂಭಿಸಿದವರು ದಲಿತ ವರ್ಗಕ್ಕೆ ಸೇರಿದವರು. ಹೀಗೆ ಹರಿಜನ ಗಿರಿಜನ ಎಂಬ ಬೇಧ ಮಾಡದೇ ಎಲ್ಲಾ ವರ್ಗದವರನ್ನು ಒಪ್ಪುವ ಮಾದಪ್ಪನ ಪರಂಪರೆಯು ಹುಟ್ಟಿಕೊಂಡಿತು.

ಎಲ್ಲರ ಮನೆಮನೆಗೂ ನುಗ್ಗುವ ದೇವರು ಮಾದೇಶ್ವರ. ಮಾದೇಶ್ವರರ ಕಥೆಯಲ್ಲಿ ಹೇಳುವಂತೆ ಅವರು ಇಲ್ಲಿ ನೆಲೆಯಾಗಲು ಕಾರಣ ದುಷ್ಟರ ಸಂಹಾರಕ್ಕೆ, ಶಿಷ್ಟರ ರಕ್ಷಣೆಗೆ, ನಾನುನಾನು ಎಂದು ಅಹಂಕಾರ ಮಾಡುವವರ ಹಮ್ಮನ್ನು ಮುರಿಯಲಿಕ್ಕೆ, ನಂಬಿದ ಭಕ್ತರ ಸಲಹಲಿಕ್ಕೆ. 


ಮಹದೇಶ್ವರರು ವೈದಿಕ ಪರಂಪರೆಯನ್ನು ಧಿಕ್ಕರಿಸುವ ಕಾರಣದಿಂದಲೇ ಇರಬಹುದು ಮಾದಪ್ಪನ ಬೆಟ್ಟದಲ್ಲಿ ಗ್ರಹಣ ಕಾಲವನ್ನೂ ಲೆಕ್ಕಿಸದೇ ಪೂಜೆ ಮಾಡುವುದು.


ಅಂದರೆ ಮಹದೇಶ್ವರರು ನಮ್ಮಲ್ಲಿನ ಮೌಢ್ಯತೆ ಹಾಗೂ ಕಂದಾಚಾರದ ವಿರುದ್ಧ ಹೋರಾಟ ನಡೆಸಿದವರು ಆಗಿರಬೇಕು.


ಒಟ್ಟಾರೆ ಹೇಳಬೇಕೆಂದರೆ ಮಹದೇಶ್ವರರು ದಕ್ಷಿಣ ಸೀಮೆಗೆ ಬಂದದ್ದು ಎಲ್ಲಾ ವರ್ಗದ ಜನರ ಉದ್ದಾರ ಮಾಡಿ ಎಲ್ಲರನ್ನೂ ಸಮವರ್ಗಕ್ಕೆ ತರುವ ಉದ್ದೇಶದಿಂದ ಇರಬಹುದು.


ಇದು ನನಗೆ ಅನಿಸಿದಂತೆ ಮಹದೇಶ್ವರರ ನಿಲುವು. ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ಅಥವಾ ಯಾರ ಮನಸ್ಸಿಗಾದರೂ ನೋವಾದಲ್ಲಿ ಯಾರ ಭಾವನೆಗಾದರೂ ಧಕ್ಕೆಯಾದಲ್ಲಿ  ಮನ್ನಿಸಬೇಕು. 


ಇದು ಕೇವಲ ನನ್ನ ಅಭಿಪ್ರಾಯ ಮಾತ್ರ. ಆದರೆ ಇದೇ ನಿಜವೆಂದು ಯಾರಮೇಲೂ ಒತ್ತಡ ಹೇರುವ ಭಾವನೆ ನನಗಿಲ್ಲ. 

Saturday, June 12, 2021

ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳಿಗೆ ನನ್ನ ನಮನಗಳು


               ಭಾರತವಾಣಿ ಬಹುಭಾಷಾ ಆನ್‌ಲೈನ್‌ ಜ್ಞಾನಕೋಶದಲ್ಲಿ (www.bharatavani.in) ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಜ್ಞಾನ ಸಂಗ್ರಹದಲ್ಲಿ ತೊಡಗಿದ್ದು ಮತ್ತು ಜ್ಞಾನಾಸಕ್ತ ಸನ್ಯಾಸಿ ಶ್ರೀ ಎಂ ನಾಗೇಂದ್ರ ಅವರು ಶ್ರೀ ಮಲೆ ಮಹದೇಶ್ವರಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಎಂಬ ಮೂಲ ಗುರುಗಳ ನಾಮಧೇಯದಿಂದ (8 ಆಗಸ್ಟ್‌ 2020) ವಿಧಿವಿಧಾನಯುಕ್ತ ಕಾರ್ಯಕ್ರಮದಲ್ಲಿ ವಿಧ್ಯುಕ್ತವಾಗಿ ನಿಯುಕ್ತಿಗೊಂಡಿರುವುದನ್ನು ನಾನು ಅತ್ಯಂತ ಅಭಿಮಾನದಿಂದ ಪ್ರಕಟಿಸುತ್ತಿದ್ದೇನೆ. 


ಸ್ವಾಮಿ ಪರಂಪರೆಯಲ್ಲಿ ಅಲ್ಲಲ್ಲಿ ನಶಿಸುತ್ತಿರುವ ಧ್ಯೇಯನಿಷ್ಠೆಯನ್ನು ಗಮನಿಸಿದಾಗ ಶ್ರೀಗಳಂತಹ ಯುವಕರು ದೃಢಹೆಜ್ಜೆ ಇಟ್ಟು ಮಠದ ಉತ್ತರಾಧಿಕಾರಿ ಆಗಿರುವುದು ತುಂಬಾ ಉತ್ತಮ ಬೆಳವಣಿಗೆ. 

ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ, ತಮ್ಮ ಅನುಭವದಲ್ಲಿ, ಹೊಸ ಹೊಣೆಗಾರಿಕೆಯಲ್ಲಿ ಶ್ರೀ ಮಠವು ಉತ್ತರೋತ್ತರ ಪ್ರಗತಿ ಸಾಧಿಸಲಿ. ಯಾವತ್ತೂ ಈ ಸಮಾಜವು ಶ್ರೀ ಮಠದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಜನಹಿತದ ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ದೇವಕೃಪೆಗೆ ಪಾತ್ರರಾಗಿ ಎಂದು ಅತ್ಯಂತ ಅಭಿಮಾನ ಮತ್ತು ನಿರೀಕ್ಷೆಗಳಿಂದ ಶುಭ ಹಾರೈಸುತ್ತೇನೆ.






                   ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿರುವ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ (ಪೂರ್ವಾಶ್ರದ ಹೆಸರು: ಎಂ. ನಾಗೇಂದ್ರ) ಅವರ ಸಂಕ್ಷಿಪ್ತ ಪರಿಚಯ.


ಶ್ರೀಗಳು ಅವರು ದಿ. 04.06.1989 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಜನಿಸಿದರು. ಅವರು ಪ್ರಾಥಮಿಕ ಸಂಸ್ಕೃತ ವೇದ ಶಿಕ್ಷಣವನ್ನು ಶ್ರೀ ಸಿದ್ದಗಂಗಾ ಮಠದಲ್ಲಿ ಮತ್ತು ಆಗಮ ಮತ್ತು ಮಾಧ್ಯಮಿಕ ಸಂಸ್ಕೃತ ಶಿಕ್ಷಣವನ್ನು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಸಂಸ್ಕೃತ ಎಂ.ಎ ಪದವಿಯನ್ನು ಹಲವು ಚಿನ್ನದ ಪದಕಗಳು ಮತ್ತು ನಗದು ಬಹುಮಾನಗಳೊಂದಿಗೆ ಪೂರೈಸಿದ್ದಾರೆ. ಅಲ್ಲದೆ ವೇದಾಂತದಲ್ಲಿ ಸಂಸ್ಕೃತ ವಿದ್ವ ತ್ ಪದವಿಯನ್ನು ಗಳಿಸಿದ್ದಾರೆ. ನಾಡಿನ ಖ್ಯಾತ ವಿದ್ವಾಂಸ ಮಠಾಧಿಪತಿಗಳೆನಿಸಿದ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ಮೈಸೂರಿನ ಶ್ರೀಕುಂದೂರು ಮಠದಲ್ಲಿದ್ದುಕೊಂಡು ಅಧ್ಯಯನ ಮಾಡಿದರು. 


ಪ್ರಸ್ತುತ ಆ ಮಠದ ಅಧ್ಯಕ್ಷರು ಮತ್ತು ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಸ್ಕೃತ ವಿವಿಯಲ್ಲಿ ಎಂ.ಫಿಲ್ ಪದವಿಯನ್ನು ಪಡೆದಿರುವ ನಾಗೇಂದ್ರ ಅವರು ಪ್ರಸ್ತುತ ಅಲ್ಲಿಯೇ ಪಿಎಚ್ ಡಿ ಪದವಿಗಾಗಿ ಶೈವಾಗಮಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರು ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮತ್ತು ವಿಶ್ವಮಟ್ಟದಲ್ಲಿ ನೇಪಾಳ ಮತ್ತು ಮಲೇಷ್ಯಾ ದೇಶಗಳಲ್ಲಿ ನಡೆದಿರುವ ವಿಚಾರಸಂಕಿರಣಗಳಲ್ಲಿ ಭಾಷಾಶಾಸ್ತ್ರ ಧರ್ಮ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸುಮಾರು 10ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ ಪುರಾಣ ಲಿಪಿಶಾಸ್ತ್ರ ಮತ್ತು ಹಸ್ತ ಪ್ರತಿಗಳ ಮೇಲೆ ವಿಶೇಷ ಅಧ್ಯಯನದಲ್ಲಿ ನಿರತರಾಗಿದ್ದಾರೆ 


2015ರಲ್ಲಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿಶಾಸ್ತ್ರ ಸಂಶೋಧಕರಾಗಿ ಕಾರ್ಯನಿರ್ವಹಿಸಿ, 2016 ರಿಂದ ಪ್ರಸ್ತುತ ರವರೆಗೆ ಮೈಸೂರಿನ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಭಾರತೀಯ ಭಾಷಾ ಸಂಸ್ಥಾನ (CIIL}ದ ಭಾರತವಾಣಿ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿದ್ವತ್ತು ದಕ್ಷತೆ ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಪರಿಗಣಿಸಿ ಸಾಲೂರು ಮಠದ ಪೀಠಾಧಿಪತಿಗಳಾದ ಶ್ರೀ ಪಟ್ಟದ ಗುರು ಸ್ವಾಮಿಗಳವರು, ಪರಮಪೂಜ್ಯ ಶ್ರೀ ಸಂತರು ಜಗದ್ಗುರುಗಳವರು, ಪರಮ ಪೂಜ್ಯ ಸಿದ್ದಗಂಗಾ ಶ್ರೀಗಳವರು, ಪರಮಪೂಜ್ಯ ದೇಗುಲ ಮಠದ ಶ್ರೀಗಳವರ ಮತ್ತು ನಾಡಿನ ಮಠಾಧೀಶರ ಆಶೀರ್ವಾದಗಳೊಂದಿಗೆ ಅವರನ್ನು ಶ್ರೀಮಠಕ್ಕೆ ನೂತನ ಪೀಠಾಧಿಪತಿಗಳನ್ನಾಗಿ ಸ್ವೀಕರಿಸಿದ್ದಾರೆ.

Thursday, June 10, 2021

ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದು ಮಾಳದ ಗರುಕೆ ಚಿಗುರ್ಯಾವೋ

 
 
  


  ಜಾನಪದ ಇಲ್ಲಿ ಭಕ್ತಿಯ ಆವೇಶದೊಂದಿಗೆ ಚಲಿಸುತ್ತಲೇ ಇದೆ. ನಾಡಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯವಾದ ಮಾದೇಶ್ವರನ ಕುರಿತ ನೂರಾರು ಕತೆಗಳು ಹಾಡುಗಳ ರೂಪ ಪಡೆದು ಜನ ಸಾಮಾನ್ಯರ ಬಾಯಿಯಲ್ಲಿ ನಲಿದಾಡುತ್ತಲೇ ಇವೆ. ಕಾಲ ಪ್ರವಾಹ ವೇಗವಾಗ ಹರಿಯುತ್ತಿದ್ದರೂ ಇಲ್ಲಿನ ಜನಪದಕ್ಕೆ, ಜನಮನದ ಭಕ್ತಿಗೆ ಮುಕ್ಕಾಗಿಲ್ಲ. ಸದ್ಯಕ್ಕೆ ಅದು ಮುಕ್ಕಾಗುವುದೂ ಇಲ್ಲ.

 
ಯಾಕೆಂದರೆ ಅಂತಹುದೊಂದು ಭಕ್ತಿಯ ಆವೇಶ ಇಲ್ಲಿನ ಜನಪದದೊಂದಿಗೆ ಬೆಸೆದುಕೊಂಡಿದೆ ಬೆಸುಗೆಯೇ ಭವ್ಯ ಸಂಸ್ಕೃತಿಯೊಂದನ್ನು ಪೊರೆಯುತ್ತಾ ಬಂದಿದೆಇದೆಲ್ಲಾ ಸಾಧ್ಯವಾಗಿರುವುದು ಮಲೆಯ ಮಹದೇಶ್ವರ ಬೆಟ್ಟದಲ್ಲಿಬೆಟ್ಟದ ಸುತ್ತಮುತ್ತಲಿನಲ್ಲಿಬೆಟ್ಟದ ಮಾದೇವನ ಪ್ರಭಾವವಿರುವ ಎಲ್ಲಾ ಕಡೆಗಳಲ್ಲಿ.
 
ಅಲ್ಲಿ ಭಕ್ತರ ಮನದಲ್ಲೆಲ್ಲಾ ಮಾದಪ್ಪಕಿವಿ ತಿರುಗಿದ ಕಡೆಯೆಲ್ಲಾ ಉಘೇ ಉಘೇಕಣ್ಣು ಹಾಯಿಸಿದಲ್ಲೆಲ್ಲಾ ಬೆಟ್ಟಗುಡ್ಡಧೂಪದೀಪಗಳ ಮಾಲೆಕಂಸಾಳೆಕುಣಿತಹಾಡು ಪಾಡುಎಲ್ಲೆಲ್ಲೂ ಮಾದಪ್ಪಅವನೊಬ್ಬನೇ ಸತ್ಯಅವನು ಕಣ್ಣು ಬಿಟ್ಟು ನೋಡಿದರೆ ಕೊರಡು ಕೊನರುವುದುಮನೆ ಬೆಳಗುವುದುಮನ ತಣಿಯುವುದುಏಳು ಬೆಟ್ಟಹತ್ತಿಏಳು ಬೆಟ್ಟಇಳಿದು ಬಂದ ದಣಿವೆಲ್ಲಾ ಮರೆಯುವುದು ಎನ್ನುವ ನಂಬಿಕೆಆನುಮಲೆಜೇನು ಮಲೆಕಾನುಮಲೆಪೊನ್ನಾಚಿ ಮಲೆಪಚ್ಚೆ ಮಲೆಪವಳ ಮಲೆಕೊಂಗು ಮಲೆಗಳು ಸೇರಿ 77 ಮಲೆಗಳ ಮಧ್ಯೆ ನೆಲೆಯಾಗಿರುವ ಧಾರ್ಮಿಕ ಗುರುಸಾಂಸ್ಕೃತಿಕ ನಾಯಕ ಮಾದಪ್ಪ ಹೆಚ್ಚಾಗಿ ಬಡವರ ಮನೆ ಕಾಯುವ ದೇವಗ್ರಾಮೀಣ ಜನರ ಬಂಧುಗುಡ್ಡರನೀಲಗಾರರ ಬಾಯಲ್ಲಿ ನಲಿದಾಡುವ ಪವಾಡ ಪುರುಷಉತ್ತರ ದೇಶದ ಕತ್ತಲ ರಾಜ್ಯದ ಉತ್ತರಾಜಮ್ಮನ ಮಗ 7 ವರ್ಷದವನಾಗಿದ್ದಾಗಲೇ ದಕ್ಷಿಣಕ್ಕೆ ಬಂದು ಬಂಕಾಪುರದ ರಕ್ಕಸ ಶ್ರವಣನ ಕೊಂದುಸುತ್ತೂರು ಮಠದಲ್ಲಿ ರಾಗಿಯ ಬೀಸಿಕುಂತೂರು ಮಠದಲ್ಲಿ ದನ ಮೇಯಿಸಿ ಎಲ್ಲಾ ಕಡೆ ಪವಾಡ ಮಾಡುತ್ತಾ ಪೂರ್ವ ಘಟ್ಟದ ನಡುವಲ್ಲಿ ನೆಲೆಯಾಗಿ ನಿಂತವನು.



ಕಲ್ಪನೆಯ ಕಣ್ಣಲ್ಲಿ ಮಾಯ್ಕಾರ :

 

                           ಹೀಗೆ ನಿಂತವನಿಗೆ ಭಕ್ತರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಹಾಡು ಕಟ್ಟಿಆ ಹೃದಯದಲ್ಲಿ ಅವನು ಗಟ್ಟಿಯಾಗಿ ನಿಲ್ಲುವಂತೆ ಮಾಡಿಕೊಂಡಿದ್ದಾರೆ. ಅಚ್ಚರಿ ಎನ್ನಿಸುವಂತಹ ಕಲ್ಪನೆಗಳನ್ನು ಕಟ್ಟಿಅದರ ಒಳಗೆ ಮಾದೇವನನ್ನು ಬೆಚ್ಚಗೆ ಇರಿಸಿದ್ದಾರೆ.

ಆನು ಮಲೆ ಹಾಸುಕೊಂಡು ಜೇನುಮಲೆ ಹೊದ್ದುಕೊಂಡು ಎಪ್ಪತ್ತೇಳು ಮಲೆಯನ್ನು ಸುರುಳಿ ಸುತ್ತಿ ತಲೆದಿಂಬನ್ನಾಗಿ ಮಾಡಿಕೊಂಡು ಒರಗಿರುವಂತಹ ನಮ್ಮ ಅಪ್ಪಾಜಿ ಮುದ್ದು ಮಾದೇವನ ಪಾದುಕ್ಕೊಂದು ಸಲ ಉಘೇ ಅನ್ರಪ್ಪ!’

ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಕಾಡುಮಲೆ, ಕಂಬತ್ತಿಮಲೆ, ಹತ್ತುಮಲೆ, ಸುತ್ತುಮಲೆ, ಮಹಂತುಮಲೆ, ವಿಭೂತಿಮಲೆ, ರುದ್ರಾಕ್ಷಿಮಲೆ, ಸಂಕುಮಲೆ, ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್ಸಲ ಉಘೇ ಅನ್ರಪ್ಪ!’

ಹೀಗೆ ತಮ್ಮದೇ ಕಲ್ಪನೆಯಲ್ಲಿ ಮಾದೇಶ್ವರನನ್ನು ಕಂಡಿದ್ದಾರೆ. ಇದೇ ರೀತಿ ಹೇಳುತ್ತಾ ಹೋದರೆ ಕಲ್ಪನೆಯ ಕಣ್ಣುಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಕೊಯಮತ್ತೂರು, ಸೇಲಂ ಹೀಗೆ ನಾಡಿನಾದ್ಯಂತ, ನಾಡಿನಾಚೆಗೆ ಭಕ್ತರನ್ನು ಹೊಂದಿರುವ ಮಾದಪ್ಪ ನಂಬಿದವರ ಮನೆಯ ಒಳಗೆ ತುಂಬಿ ತುಳುಕಾಡುವ ದೇವ. ಎಲ್ಲರ ಬಾಯಿಯಲ್ಲೂ ಏಕವಚನದಲ್ಲಿ ಕರೆಸಿಕೊಳ್ಳುವಷ್ಟುಆಪ್ತ. ಸಂಶೋಧನೆಗೆ ಇಳಿದವ ಪಾಲಿಗೆ ಇತಿಹಾಸ ಪುರುಷ. ಜನಪದ ಮತ್ತು ಸಾಹಿತ್ಯ ಲೋಕದ ಕಥಾನಾಯಕ. ಹೀಗೆ ನಾನಾ ಅವತಾರಗಳಲ್ಲಿ ಅವನಿಂದಿಗೂ ಜೀವಂತ.

 

ಪ್ರಪಂಚದ ಮಹಾ ಮೌಖಿಕ ಮಹಾಕಾವ್ಯ :

 

                 ಮಾದೇಶ್ವರನ ಗುಡ್ಡರು, ನೀಲಗಾರರ ಬಾಯಲ್ಲಿ ಮಹಾಕಾವ್ಯವಾಗಿ ಮದೇಶ್ವರ ಜೀವಂತವಾಗಿ ಇರುವ ರೀತಿಯೇ ಹೆಂಗಸರ ಬಾಯಿಯಲ್ಲಿ ಹಾಡುಗಳಾಗಿ ಉಳಿದಿದ್ದಾನೆ. ಗುಡ್ಡರು, ನೀಲಗಾರರು ಮಹಾಕಾವ್ಯವನ್ನು ಇರುಳಿಡೀ ಹಾಡಿದರೆ, ಹೆಂಗಸರು ಮಹಾಕಾವ್ಯದ ಹಿನ್ನೆಲೆಯಲ್ಲಿ ಹಾಡುಗಳನ್ನು ಕಟ್ಟಿಹಾಡಿದ್ದಾರೆ. ಹಾಡುಗಳೇ ಇಂದು ಜನಪದವಾಗಿ ಬೆಳೆದು ನಿಂತಿದೆ. ಏಳು ಹಗಲು, ಏಳು ರಾತ್ರಿಗಳ ಕಾಲ ನಿರಂತರವಾಗಿ ಹಾಡುವಷ್ಟುದೊಡ್ಡದಾಗಿರುವ ಮದೇಶ್ವರ ಮಹಾಕಾವ್ಯ ಇದೇ ಕಾರಣಕ್ಕೆ ಜಗತ್ತಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯ ಆಗಿರುವುದು. ಬೇವಿನಹಟ್ಟಿಕಾಳಮ್ಮನ ಕತೆ, ಬಾಣಸೂರನ ಕಥೆ, ನೀಲವೇಣಿ ಕಥೆ, ಸರಗೂರಯ್ಯನ ಕತೆ, ಶರಣೆ ಶಂಕವ್ವನಕಥೆ ಹೀಗೆ ಹಲವು ಕಥೆಗಳಿವೆ.

ಮಹಾಕಾವ್ಯದಲ್ಲಿವೆ. ಒಂದೊಂದು ಕಥೆಗೂ ಪವಾಡಗಳ ಸ್ಪರ್ಶವಿದೆ. ಭಕ್ತಿಯ ಲೇಪನವಿದೆ. ಮಹಾಕಾವ್ಯವನ್ನು ಕೇಳಬೇಕು, ಕಣ್ತುಂಬಿಕೊಳ್ಳಬೇಕು, ಗುಡ್ಡರ ಹಾಡು, ನೀಲಗಾರರ ಪದ, ಜನಪದರ ರಾಗವನ್ನು ಸವಿಯಬೇಕು ಎಂದರೆ ಮಾದಪ್ಪನ ಪರಿಷೆಗೆ ಹೋಗಬೇಕು. ಅಕ್ಷರ ಗೊತ್ತಿಲ್ಲದವರ ಮಹಾಕಾವ್ಯವನ್ನು ಅಲ್ಲಿ ಕೇಳಬೇಕು. ಅಲ್ಲಿ ಸಂಗೀತ ಇದೆ, ಸಾಹಿತ್ಯ ಇದೆ, ಭಕ್ತಿ ಇದೆ, ಕುಣಿತ ಇದೆ, ಸಂಸ್ಕೃತಿ ಇದೆ, ಶ್ರೀಮಂತ ಜನಪದವಿದೆ. ಒಂದು ಲೆಕ್ಕಕ್ಕೆ ಇದು ಬಡವರ, ಹಿಂದುಳಿದವರ, ಗ್ರಾಮೀಣರ, ಮಹಿಳೆಯರ ಸಾಂಸ್ಕೃತಿಕ ಅಭಿವ್ಯಕ್ತಿ.

 




ಜಾತ್ರೆಯಲ್ಲಿ ಕಂಡ ಮುಖ :

 

                ಬೆಟ್ಟಕ್ಕೆ ಬಂದುಹೋಗುವ ಭಕ್ತರಲ್ಲಿ ಹೆಂಗಸರದ್ದೇ ಮೈಲುಗೈ. ಮಾದೇವ ಮಾಯ್ಕಾರ ಮಾದೇವ ಆಗಲು, ಮುದ್ದು ಮಾದೇವ ಆಗಲು, ದುಂಡು ಮುಖದ ಮಾದೇವ ಆಗಲು ಅವರೇ ಕಾರಣ. ವಿವಿಧ ರೀತಿಯ ಹರಕೆಗಳನ್ನು ಹೊತ್ತು, ನನ್ನ ಕಷ್ಟಕಳೆಯೋ ಮಾದೇವ, ನನ್ನ ಮನೆಯ ಉಳಿಸೋ ಮಾದೇವ ಎಂದು ಏಕವಚನದಲ್ಲಿಯೇ ಅತ್ಯಂತ ಪ್ರೀತಿಯಿಂದ ಬೇಡುತ್ತಾರೆ. ಬೈಯುತ್ತಾರೆ, ಅವನೊಂದಿಗೆ ಮುನಿಸಿಕೊಳ್ಳುತ್ತಾರೆ. ಪಂಜು ಸೇವೆ, ಉರುಳು ಸೇವೆ, ಹುಲಿವಾಹನ ಸೇವೆ, ನಂದಿವಾಹನ ಸೇವೆ, ಧೂಪಸೇವೆ ಹೀಗೆ ದೇಹವನ್ನು ದಂಡಿಸುತ್ತಾ, ಪದ ಕಟ್ಟಿಹಾಡುತ್ತಾ ಮಾದೇವನ ಬಳಿ ತಮ್ಮ ಕಷ್ಟಹೇಳಿಕೊಂಡು ವರ ಬೇಡುತ್ತಾರೆ. ಉತ್ತರಾಜಮ್ಮನಿಗೆ, ಶರಣೆ ಸಂಕವ್ವನಿಗೆ, ಕಾರಯ್ಯ, ಬಿಲ್ಲಯ್ಯರಿಗೆಲ್ಲಾ ಉಘೇ ಉಘೇ ಎನ್ನುತ್ತಾ ಭಕ್ತಿಯ ಆವೇಶದಲ್ಲಿ ಜಗದ ಜಂಜಾಟಗಳ ಮರೆಯುತ್ತಾರೆ. ಹಣೆ ತುಂಬಾ ವಿಭೂತಿ ಹಚ್ಚಿಕೊಂಡು ನಮ್ಮನ್ನು ಕಾಯುವವನೊಬ್ಬನಿದ್ದಾನೆ, ಕಷ್ಟಗಳೆಲ್ಲಾ ಮುಕ್ತಿ ಕೊಡುತ್ತಾನೆ ಎಂದುಕೊಳ್ಳುತ್ತಾ ಅದೇ ನಂಬಿಕೆಯಲ್ಲಿ ನಲಿವು ಕಾಣುತ್ತಾರೆ. ಹಾಡುತ್ತಾ, ಕುಣಿಯುತ್ತಾ ಸಾಗುತ್ತಾರೆ.

 

 ಬರುವವರು ಮಹದೇಶ್ವರ ಬೆಟ್ಟದ ಬುಡ (ತಾಳುಬೆಟ್ಟ)ದಿಂದಲೇ ನಡೆದುಕೊಂಡು ಬರುತ್ತಾರೆ. ಈಗ ಒಳ್ಳೆಯ ರಸ್ತೆ ಇರುವ ಕಾರಣ, ಸಾರಿಗೆ ವ್ಯವಸ್ಥೆಯೂ ಚೆನ್ನಾಗಿಯೇ ಇದ್ದು, ಬಸ್‌, ಕಾರು, ಆಟೋ, ಬೈಕ್ಗಳಲ್ಲಿ ಬಂದು ಬೆಟ್ಟಸೇರುತ್ತಾರೆ. ಆಲಂಬಾಡಿ ಜುಂಜೇಗೌಡ ಕಟ್ಟಿಸಿದ ದೇವಸ್ಥಾನದಲ್ಲಿ ನೆಲೆಯಾಗಿರುವ ಮಾದೇವನನ್ನು ಕಾಣುತ್ತಾರೆ. ಅವನ ಬಗ್ಗೆ ಹಾಡುತ್ತಾರೆ, ಕುಣಿಯುತ್ತಾರೆ. ಈಗ ಉಳಿದುಕೊಳ್ಳಲೂ ಇಲ್ಲಿ ಸಾಕಷ್ಟುಅನುಕೂಲಗಳಿವೆ. ಸರಕಾರ ಮಲೆ ಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಾಕಷ್ಟುಅಭಿವೃದ್ಧಿ ಕಾರ್ಯ ಮಾಡಿದೆ. ಸುತ್ತೂರು ಮಠ, ಕುಂತೂರು ಮಠ ಸೇರಿ ನಾಡಿನ ಹಲವು ಮಠಗಳು ಇಲ್ಲಿ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿವೆ. ನಿತ್ಯ ಅನ್ನದಾಸೋಹವಿದೆ.










ನಾಗಮಲೆಯ ದಾರಿಯಲ್ಲಿ :

 

                              ಬೆಟ್ಟಕ್ಕೆ ಬರುವವರ ಮತ್ತೊಂದು ಆಕರ್ಷಣೆ ನಾಗಮಲೆ. ಏಳು ಬೆಟ್ಟದಾಚೆಗೆ ನಾಗಮಲೆಯಲ್ಲಿ ನಾಗನ ನೆರಳಿನಲ್ಲಿ ಮಾದಪ್ಪ ನೆಲೆಯಾಗಿದ್ದಾನೆ ಎನ್ನುವ ನಂಬಿಕೆ ಭಕ್ತರದ್ದು. ಅದಕ್ಕಾಗಿಯೇ ಬೆಟ್ಟಕ್ಕೆ ಬಂದವರಲ್ಲಿ ಅರ್ಧದಷ್ಟಾದರೂ ಭಕ್ತರು ನಾಗಮಲೆಗೆ ನಡೆದು ಹೋಗುತ್ತಾರೆ. ಸುತ್ತಲೂ ಕಾಡು, ಕಲ್ಲು, ಮುಳ್ಳಿನ ಹಾದಿಯಲ್ಲಿ ಏಳು ಬೆಟ್ಟಗಳನ್ನತ್ತಿಳಿದು ನಾಗಮಲೆ ತಲುಪುತ್ತಾರೆ. ಈಗ ನಾಗಮಲೆಗೆ ಸಾಗುವ ಅರ್ಧ ದಾರಿಯತನಕ ಜೀಪ್ಗಳು ಓಡಾಡುವ ವ್ಯವಸ್ಥೆಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಇವುಗಳ ಓಟಾಟ ಶುರು. ಅಲ್ಲಿಗೆ ಅರ್ಧದ ತನಕ ಜೀಪ್ನಲ್ಲಿ ಹೋಗಿ ಇನ್ನರ್ಧವನ್ನು ಕಾಲು ನಡಿಗೆಯಲ್ಲಿ ಸಾಗಿದರೆ ನಾಗಮಲೆ ತಲುಪಿಕೊಂಡುಬಿಡಬಹುದು. ದಾರಿ ಮಧ್ಯದಲ್ಲಿ ಎರಡು ಊರು. ಅಲ್ಲಿ ಸೋಲಿಗರು, ಬೇಡಗಂಪಣರು, ಕಾಡು ಜನರ ವಾಸ. ಕೃಷಿ, ಬೇಟೆಯೇ ಅವರ ಮೂಲ ಕಸುಬಾದರೂ ಈಗೀಗ ನಾಗಮಲೆಗೆ ಹೋಗಿ ಬರುವ ಭಕ್ತರ ಅವಶ್ಯಗಳನ್ನು ಪೂರೈಸಲು ಸಣ್ಣ ಪುಟ್ಟಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಇವರ ದಯೆಯಿಂದ ನಾಗಮಲೆಯ ಹಾದಿ ಸಲೀಸು. ಜಾತ್ರೆಯ ವೇಳೆ ಇಲ್ಲಿಗೆ ಹೋದರಂತೂ ದಾರಿ ಸಾಗುವ ಉದ್ದಕ್ಕೂ ಮಾದೇವನ ಪದಗಳು, ಉಘೇ, ಉಘೇ ಘೋಷಣೆ, ಕಾಡುಜನರ ಉಪಚಾರ ಎಲ್ಲವೂ ಲಭ್ಯ. ಇದಿಷ್ಟೇ ಅಲ್ಲ, ಭಕ್ತಿಯೊಂದಿಗೆ ಮೈಮನ ಮುಟ್ಟುವ ಬೆಟ್ಟದ ಸಾಲು

ಅಷ್ಟೇನೂ ದಟ್ಟವಲ್ಲದ ಕುರುಚಲು ಕಾಡು, ನಾಗಮಲೆ ಏರಿ ನಿಂತರೆ ಬದಿಗೆ ಕಾವೇರಿ, ಪಾಲಾರ್ನದಿಗಳ ದರ್ಶನ. ನದಿಯಾಚೆಗೆ ತಮಿಳುನಾಡು. ನಾಗಮಲೆ ದಾಟಿ ಅದೇ ಹಾದಿಯಲ್ಲಿ ಕಾಡು ಹಾದಿಯಲ್ಲಿಯೇ ಮುಂದೆ ಸಾಗಿದರೆ ಕರ್ನಾಟಕ ಗಡಿ ಗೋಪಿನಾಥಂ. ಅಲ್ಲಿಂದ ಹೊಗೆನಕಲ್ಫಾಲ್ಸ್ಗೆ ಹಾದಿ. ಹೀಗೆ ಭಕ್ತಿಯ ನೆರಳಲ್ಲಿ ಮಿಂದು, ಪ್ರಕೃತಿಯ ಮಡಿಲಲ್ಲಿ ವಿರಮಿಸಿ ಹೊರಡುವವರ ಸಂಖ್ಯೆಯೂ ಇಲ್ಲಿದೆ….

      ಕನ್ನಡ ನಾಡಿನ ಜಾನಪದ ಸಾಹಿತ್ಯದಲ್ಲಿ ಕಂಸಾಳೆ ಪದಗಳಿಗೆ ಅದರದ್ದೇ ಆದ ಸ್ಥಾನವಿದೆ. ಇಡೀ ವಿಶ್ವದಲ್ಲೇ ಕಲೇವಲ ಎಂಬ ಪೋಲಾಂಡ್ ದೇಶದ ಮೌಖಿಕ ಕಾವ್ಯವು ಅತಿ ದೊಡ್ಡ ಮಹಾಕಾವ್ಯ. ಅದು ಬಿಟ್ಟರೆ ಎರಡನೆಯದು ನಮ್ಮ ಮಾದೇಶ್ವರನ ಕಾವ್ಯ. ಮೌಖಿಕ ಕಾವ್ಯ ಎಂದರೆ ಅದು ಬಾಯಿಂದ ಬಾಯಿಗೆ ಸಾಗಿಬಂದ ಕಾವ್ಯ, ಬರೆದಿಟ್ಟ ಕಾವ್ಯವಲ್ಲ. ಅಂದರೆ ಮಾತಿನ ಮೂಲಕ ರಚನೆಯಾದ ಕಾವ್ಯ.




ಮುಖ್ಯವಾಗಿ ಯುವಜನತೆಗೆ :

 

                         ನಮ್ಮ ಮಾದೇಶ್ವರನ ಕಾವ್ಯಕ್ಕೆ ಕಂಸಾಳೆ ಕಾವ್ಯ ಎಂದೂ ಹೇಳಬಹುದು ಕಾರಣ ಮಾದೇಶ್ವರನ ಕಥೆ ಮಾಡುವಾಗ ಕಂಸಾಳೆ ದಂಬಡಿ ತಂಬೂರಿ ಮುಂತಾದ ಉಪಕರಣಗಳನ್ನು ಬಳಸಿ ಮಾದೇಶ್ವರನ ಕಥೆ ಮಾಡಲಾಗುತ್ತದೆ. ಇದರಲ್ಲಿ ಕಂಸಾಳೆ ಬಟ್ಟಲು ಮುಖ್ಯ ಉಪಕರಣ. ಮಾದೇಶ್ವರನ ಕಥೆ ಅಥವಾ ಕಾವ್ಯ ಇದು ಏಳು ಹಗಲು ಏಳು ರಾತ್ರಿ ಕಾವ್ಯ ಎಂದು ನಾನು ಕೇಳಿದ್ದೇನೆ. ಇದರಲ್ಲಿ ಅನೇಕ ಸಾಲುಗಳು ಬರುತ್ತವೆ. ಅವುಗಳಲ್ಲಿ ಮುಖ್ಯವಾದವು - ಮಾದೇಶ್ವರ ಹುಟ್ಟಿ ಬೆಳೆದ ಸಾಲು, ಸಂಕಮ್ಮನ ಸಾಲು, ಬೇವಿನಹಟ್ಟಿ ಕಾಳಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಆಲಂಬಾಡಿ ಜುಂಜೆಗೌಡನ ಸಾಲು, ಸರಗೂರಯ್ಯನ ಸಾಲು ಮುಖ್ಯವಾದವು.

 

ಇಂತಹ ಕಾವ್ಯಗಳು ಕೇಳುಗರಲ್ಲಿ ಆಸಕ್ತಿ, ಕುತೂಹಲ, ಹಾಸ್ಯ, ಭಕ್ತಿ  ಭಾವಗಳನ್ನು ಮೂಡಿಸುತ್ತವೆ. ಕೇಳಲು ಇಂಪಾಗಿರುತ್ತದೆ. ಹಿಂದೆ ಯಾರಾದರೂ ಮೃತರಾದರೆ ಅವರ ವೈಕುಂಠ ಸಮಾರಾಧನೆ ದಿನದಂದು ಇಂತಹ ಕಂಸಾಳೆ ಕಥೆಗಳನ್ನೋ ಅಥವಾ ಹರಿಕಥೆಗಳನ್ನೋ ಮಾಡಿಸುತ್ತಿದ್ದರು. ಈಗ ಕ್ರಮೇಣ ಇಂತಹ ಆಚರಣೆಗಳು ಕಡಿಮೆಯಾಗಿವೆ.

 

ಮಾದೇಶ್ವರನ ಬಗ್ಗೆ ನಾವು ತಿಳಿಯಬೇಕಾದರೆ ನಮಗೆ ಕಂಸಾಳೆ ಕಥೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ. ಆದರೆ ಇದರ ಮೇಲಿನ ಆಸಕ್ತಿ ಇಂದಿನ ಯುವಜನಾಂಗದಲ್ಲಿ ಕಾಣುತ್ತಿಲ್ಲ ಎಂಬುದು ವಿಷಾದನೀಯ.

 

ನಮ್ಮ ಪುರಾಣಗಳಲ್ಲಿ ನಾವು ಯಾವುದೇ ಪುಣ್ಯಕ್ಷೇತ್ರಗಳಿಗೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದರೆ ನಾವು ಸ್ಥಳದ ಮಹಾತ್ಮೆ ತಿಳಿಯಬೇಕು ಇದರಿಂದ ನಮಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ನಾವು ನಮ್ಮ ಮಾದೇಶ್ವರನ ಬೆಟ್ಟಕ್ಕೆ ಭೇಟಿ ನೀಡಿದರೆ ನಾವು ನಮಗೆ ಗೊತ್ತಿಲ್ಲದ ಮಾಹಿತಿ ಸಂಗ್ರಹಿಸಬೇಕು. ಮಾದೇಶ್ವರನ ಕಾವ್ಯ ನಮ್ಮ ಕನ್ನಡ ನಾಡಿನ ಜಾನಪದ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದೆ.

 

ಕಾವ್ಯವು ಸಾವಿರಾರು ಜಾನಪದ ಗೀತೆಗಳಿಗೆ ತಾಯಿಬೇರಾಗಿದೆ. ಆದರೆ ನಮ್ಮ ದುರಾದೃಷ್ಟಕ್ಕೆ ಇಂದಿನ ಕೆಲವು ಯುವಜನಾಂಗ ಮಾದೇಶ್ವರನ ಬೆಟ್ಟಕ್ಕೆ ಕೇವಲ ಸೆಲ್ಫಿ ಫೋಟೋ ತೆಗೆದುಕೊಳ್ಳಲು, ಅಥವಾ ಕೇವಲ ಮನರಂಜನೆಗೋಸ್ಕರ ಅಥವಾ ಮೋಜು ಮಸ್ತಿ ಮಾಡಲಿಕ್ಕೆ ಬರುತ್ತಾರೇ ವಿನಃ ಮಾದಪ್ಪನ ಮೇಲಿನ ಆಸಕ್ತಿ ಕೆಲವರಿಗೆ ಬೇಕಿಲ್ಲ. ಬರೀ ಸ್ನಾನ ಮಾಡಿ ಸರತಿಯಲ್ಲಿ ನಿಂತು ಸ್ವಾಮಿಯ ದರ್ಶನ ಮಾಡಿ ಕೆಲವು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಎಷ್ಟು ಲೈಕ್ ಎಷ್ಟು ಕಮೆಂಟ್ ಬರುತ್ತವೆ ಎಂದು ತಿಳಿದುಕೊಂಡು ಖುಷಿ ಪಡುತ್ತಾರೆ.

 

ನಾವು ನಮ್ಮ ಸಂಸ್ಕೃತಿ ಪರಂಪರೆಗಳನ್ನು ರಕ್ಷಿಸಬೇಕು. ಮಾದಪ್ಪನ ಕಥೆ ಮಾಡುವ ನೀಲಗಾರರಿಗೆ ಪ್ರೋತ್ಸಾಹ ನೀಡಬೇಕು. ಮಾದೇಶ್ವರನ ಕಥೆಗಳು ಯೂಟ್ಯೂಬ್ನಲ್ಲಿ ಸಿಗುತ್ತದೆ. ಕೆಲವರು ಇಂತಹ ಪುಣ್ಯಕಥೆಗಳನ್ನು ಅಪ್ಲೋಡ್ ಮಾಡಿದ್ದಾರೆ. ಅವುಗಳನ್ನು ಕೇಳಿ ಆನಂದಿಸಿ. ಅವುಗಳಲ್ಲಿ ಸಿಗುವ ಮಾಹಿತಿ ಸಂಗ್ರಹಿಸಿ. ಪುಣ್ಯಕಥೆಗಳ ಸಂಗ್ರಹದಿಂದ ನಿಜಕ್ಕೂ ಪುಣ್ಯ ದೊರೆಯಲಿದೆ.

ಒಂದಂತೂ ಸತ್ಯ, ಎಲ್ಲಿಯವರೆಗೆ ಮಾದೇಶ್ವರನ ಕಥೆಗಳು ಇರುತ್ತವೆಯೋ ಅಲ್ಲಿಯವರೆಗೂ ಮಹದೇಶ್ವರ ಇರುತ್ತಾನೆ. ಯಾವಾಗ ಇಂತಹ ಕಥೆಗಳು ಮರೆಯಾಗುತ್ತವೆಯೋ ಅಂದೇ ಮಹದೇಶ್ವರ ಮರೆಯಾಗುತ್ತಾನೆ.

 

                                                                            ಶ್ರೀ ಮಲೈ ಮಹದೇಶ್ವರ ಸ್ವಾಮಿ ತಂಡ 

ಚೇತನ್ ಬಂಡಳ್ಳಿ

     





.

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*     ಇದು ಒಂದು ದಿನದ ಮಾತಲ್ಲ ಪ್...